ಅನಧಿಕೃತ ನಾಮಫಲಕ ಅಳವಡಿಕೆಗೆ ಬ್ರೇಕ್

High court logo 2
Published on

ಬೆಂಗಳೂರು: ಹಾಲಿ, ಮಾಜಿ ಜನಪ್ರತಿನಿಧಿಗಳು ಖಾಸಗಿ ವಾಹನಗಳ ಮೇಲೆ ಇನ್ಮುಂದೆ ಹುದ್ದೆ, ಹೆಸರು, ಸರ್ಕಾರಿ ಲಾಂಛನ ಹಾಗೂ ಚಿಹ್ನೆ ಹೊಂದಿದ ಯಾವುದೇ ನಾಮಫಲಕ ಅಳವಡಿಸಬಾರದು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಆನಂದ್ ಶೆಟ್ಟಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಪೀಠ, ಗ್ರಾಪಂ, ತಾಪಂ, ಜಿಪಂ, ನಗರ ಪಾಲಿಕೆ, ವಿಧಾನಸಭೆ ಮತ್ತು ಲೋಕಸಭೆಯ ಹಾಲಿ-ಮಾಜಿ ಸದಸ್ಯರು ತಮ್ಮ ಖಾಸಗಿ ವಾಹನಗಳ ಮೇಲೆ ನೋಂದಣಿ ಸಂಖ್ಯೆ ಹೊರತುಪಡಿಸಿ, ಬೇರೆ ಯಾವುದೇ ನಾಮಫಲಕ ಅಳವಡಿಸಬಾರದು ಎಂದು ಆದೇಶಿಸಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಸಂಸ್ಥೆಗಳು, ಅರೆ ನ್ಯಾಯಿಕ ಸಂಸ್ಥೆಗಳ ಹೆಸರು, ಲಾಂಛನ-ಚಿಹ್ನೆಗಳನ್ನು ಹೋಲುವಂಥ ಫಲಕಗಳನ್ನು ಖಾಸಗಿ ಸಂಘಟನೆ, ಸಂಘ-ಸಂಸ್ಥೆಗಳೂ ಅಳವಡಿಸಬಾರದು ಎಂದು ಸೂಚಿಸಿದೆ. ನಿಯಮ ಉಲ್ಲಂಘಿಸಿ ನಾಮಫಲಕ ಅಳವಡಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ಅನಧಿಕೃತ ನಾಮಫಲಕಗಳನ್ನು ತೆರವುಗೊಳಿಸಿ ಜ.22ರಂದು ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ.

ವರದಿ ಸಲ್ಲಿಸಿದ ಸರ್ಕಾರ: ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರಸನ್ನ ದೇಶಪಾಂಡೆ, ಪ್ರಕರಣ ಸಂಬಂಧ ಡಿ.11 ಮತ್ತು 18ರಂದು ಹೈಕೋರ್ಟ್ ನೀಡಿದ ಆದೇಶ ಅನುಸಾರ ರಾಜ್ಯ ಸಾರಿಗೆ ಮತ್ತು ಪೊಲೀಸ್ ಇಲಾಖೆ ಕೈಗೊಂಡ ಕ್ರಮಗಳ ಕುರಿತ ವರದಿಯನ್ನು ಪ್ರಮಾಣಪತ್ರ ಮೂಲಕ ನ್ಯಾಯಪೀಠಕ್ಕೆ ಸಲ್ಲಿಸಿದರು.

ಸರ್ಕಾರಿ ಹಾಗೂ ನ್ಯಾಯಿಕ ಸಂಸ್ಥೆಗಳ ಲಾಂಛನ, ಹೆಸರುಗಳನ್ನು ಬಳಸುವುದು ಕಾನೂನು ಬಾಹಿರವೆಂದು ತಿಳಿಸಲು ರಾಜ್ಯದ ಎಲ್ಲ ಪೊಲೀಸ್ ಅಧೀಕ್ಷಕರು, ನಗರ ಪೊಲೀಸ್ ಆಯುಕ್ತರು ತಮ್ಮ ಘಟಕಗಳ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಚರಣೆ ಹಮ್ಮಿಕೊಂಡಿದ್ದರು. ವಿಶೇಷ ಕಾರ್ಯಾಚರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡಲಾಗಿದೆ. 2019ರ ಡಿ.28ರಿಂದ 31ರವರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಶಿವಮೊಗ್ಗ, ಬೆಳಗಾವಿ ಮತ್ತು ಕಲಬುರಗಿ ವಿಭಾಗದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, ಒಟ್ಟು 10,079 ವಾಹನಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ ಅನಧಿಕೃತವಾಗಿ ನಾಮಫಲಕ ಅಳವಡಿಸಿದ್ದ 841 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ, ಒಟ್ಟು 4,89,400 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಜನಪ್ರತಿನಿಧಿಗಳ ವಿರುದ್ಧ ತನಿಖೆ ಕೋರಿದ್ದ ಪಿಐಎಲ್ ಇತ್ಯರ್ಥ

ಜನಪ್ರತಿನಿಧಿಗಳ ಆದಾಯ ವರ್ಷದಿಂದ ವರ್ಷಕ್ಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಬಗ್ಗೆ ತನಿಖೆಗೆ ಆದೇಶಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ. ಬೀದರ್​ನ ಗುರುನಾಥ್ ವಡ್ಡೆ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಹಾಗೂ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಪೀಠ ಶುಕ್ರವಾರ ವಿಚಾರಣೆ ನಡೆಸಿತು. ಈ ವಿಚಾರದಲ್ಲಿ ಏಕಾಏಕಿ ಆದೇಶ ನೀಡಲಾಗದು. ಮೊದಲು ಸಂಬಂಧಿಸಿದ ಸಕ್ಷಮ ಪ್ರಾಧಿಕಾರವಾಗಿರುವ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಮನವಿ ಸಲ್ಲಿಸಿ. ಎಸಿಬಿ ಕ್ರಮ ಕೈಗೊಳ್ಳದಿದ್ದರೆ ಆನಂತರ ಅರ್ಜಿದಾರರ ಮನವಿಯನ್ನು ನ್ಯಾಯಾಲಯ ಪರಿಗಣಿಸಬಹುದು ಎಂದು ಪೀಠ ಅಭಿಪ್ರಾಯಪಟ್ಟಿತು. 2019ರ ನ.25ರಂದು ಅರ್ಜಿದಾರರು ಸರ್ಕಾರದ ಮುಖ್ಯಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ. ಅವರಿಗೆ ತನಿಖೆ ನಡೆಸುವ ಅಧಿಕಾರವಿಲ್ಲ ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು. ಅರ್ಜಿದಾರರ ಪರ ವಕೀಲರು ವಾದಿಸಿ, ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ 75 ಹಾಗೂ ಲೋಕಾಯುಕ್ತ ಕಾಯ್ದೆ ಸೆಕ್ಷನ್ 22ರ ಅನುಸಾರ ಎಲ್ಲ ಜನಪ್ರತಿನಿಧಿಗಳು ಪ್ರತಿವರ್ಷ ಲೋಕಾ ಯುಕ್ತಕ್ಕೆ ತಮ್ಮ ಆಸ್ತಿ ವಿವರ ಸಲ್ಲಿಸಬೇಕು. 2019ರಲ್ಲಿ ನವೆಂಬರ್ ತಿಂಗಳಾದರೂ 36 ಶಾಸಕರು ಆಸ್ತಿ ವಿವರ ಸಲ್ಲಿಸಿರಲಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net