

ಬ್ರಾಸಿಲಿಯಾ: ಬ್ರಿಟನ್ನ ಆಕ್ಸ್ಫರ್ಡ್ ಯೂನಿವರ್ಸಿಟಿ ಮತ್ತು ಅಸ್ಟ್ರಾಜೆನೆಕಾ ಕಂಪನಿ ಸೇರಿ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆಯ ಕ್ಲಿನಿಕಲ್ ಟ್ರಯಲ್ ವೇಳೆ ಬ್ರೆಜಿಲ್ ಮೂಲದ ಸ್ವಯಂಸೇವಕ ಸಾವಿಗೀಡಾಗಿರುವುದಾಗಿ ಬ್ರೆಜಿಲಿಯನ್ ಆರೋಗ್ಯಾಧಿಕಾರಿ ಅನ್ವಿಸಾ ತಿಳಿಸಿದ್ದು, ಇದರ ಹೊರತಾಗಿಯೂ ಟ್ರಯಲ್ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಪರೀಕ್ಷೆ ಮುಂದುವರಿಸುವುದಾಗಿ ಆಕ್ಸ್ಫರ್ಡ್ ಖಚಿತ ಪಡಿಸಿದೆ. ಎಚ್ಚರಿಕೆಯ ಮೌಲ್ಯಮಾಪನ ಬಳಿಕ ಕ್ಲಿನಿಕಲ್ ಟ್ರಯಲ್ನ ಸುರಕ್ಷತೆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಆಕ್ಸ್ಫರ್ಡ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಇನ್ನು ಸಾವಿನ ಸುದ್ದಿ ತಿಳಿದ ಬೆನ್ನಲ್ಲೇ ಅಸ್ಟ್ರಾಜೆನೆಕಾ ಕಂಪನಿ ತಕ್ಷಣ ಪ್ರತಿಕ್ರಿಯಿಸಲು ನಿರಾಕರಿಸಿದೆ.
ಮಹಾಮಾರಿ ಕರೊನಾಗೆ ಲಸಿಕೆ ಕಂಡುಹಿಡಿಯುವಲ್ಲಿ ಆಕ್ಸ್ಫರ್ಡ್ ಮತ್ತು ಅಸ್ಟ್ರಾಜೆನೆಕಾ ಕಂಪನಿ ಮುಂಚೂಣಿಯಲ್ಲಿವೆ. ಭಾರತದ ಜತೆಗೆ ಇಡೀ ವಿಶ್ವವೇ ಈ ಲಸಿಕೆ ಮೇಲೆ ಭಾರಿ ಭರವಸೆಯನ್ನು ಹೊಂದಿವೆ. ಇಡೀ ಜಗತ್ತು ಸಹ ಕರೊನಾ ಲಸಿಕೆಯನ್ನು ಎದುರು ನೋಡುತ್ತಿದೆ. ಈ ಸಂದರ್ಭದಲ್ಲಿ ಕ್ಲಿನಿಕಲ್ ಟ್ರಯಲ್ನಲ್ಲಿ ಸ್ವಯಂ ಸೇವಕನ ಸಾವಿನ ವಿಚಾರ ಆಘಾತವೇ ಸರಿ.
ಇನ್ನು ಕರೊನಾ ಲಸಿಕೆಯಿಂದ ಸ್ವಯಂ ಸೇವಕ ಮೃತಪಟ್ಟರೆ ಅಂತಹ ಲಸಿಕೆಯ ಕ್ಲಿನಿಕಲ್ ಟ್ರಯಲ್ ಅನ್ನು ಅಮಾನತ್ತಿನಲ್ಲಿ ಇಡಲಾಗುತ್ತದೆ. ಆದರೆ, ವ್ಯಕ್ತಿಗೆ ಮೆನಿಂಜೈಟಿಸ್ (ಮೆದುಳು ಉರಿಯೂತ) ಕಾಯಿಲೆಗಾಗಿ ಔಷಧಿ ನೀಡಲಾಗಿತ್ತು ಎಂದು ವರದಿಯಾಗಿದೆ.
ಇಷ್ಟೆಲ್ಲಾ ಗೊಂದಲಗಳ ನಡುವೆ ಬ್ರಜಿಲ್ನ ಸ್ವತಂತ್ರ ಪರಿಶೀಲನಾ ಸಮಿತಿ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಮುಂದುವರಿಸಲು ಶಿಫಾರಸು ಮಾಡಿದೆ ಎಂದು ಸಾವೋಪೋಲೋ ಫೆಡರಲ್ ಯೂನಿವರ್ಸಿಟಿ ತಿಳಿಸಿದೆ. ಅಲ್ಲದೆ, ಇದೇ ಯೂನಿವರ್ಸಿಟಿಯು ಸಹ ಟ್ರಯಲ್ಗೆ ನೆರವು ನೀಡುತ್ತಿದೆ. ಬ್ರೆಜಿಲ್ ಸ್ವಯಂ ಸೇವಕ ಎಂಬುದನ್ನು ಖಚಿತಪಡಿಸಿದ್ದು ಸಹ ಇದೇ ಯೂನಿವರ್ಸಿಟಿ, ಆದರೆ, ಹೆಚ್ಚಿನ ಮಾಹಿತಿಯನ್ನು ಒದಗಿಸಿಲ್ಲ.
ಇನ್ನು ಲಸಿಕೆ ಬಗ್ಗೆ ಮಾಹಿತಿ ನೀಡಿರುವ ಬ್ರಜಿಲಿಯನ್ ಯೂನಿವರ್ಸಿಟಿ ವಕ್ತಾರ, ಟ್ರಯಲ್ನಲ್ಲಿ ಒಳಗೊಂಡಿರುವ 8 ಸಾವಿರ ಮಂದಿ ಸೇರಿದಂತೆ ಒಟ್ಟು 10 ಸಾವಿರ ಸ್ವಯಂ ಸೇವಕರಿಗೆ ಬ್ರೆಜಿಲ್ನ 6 ನಗರಗಳಲ್ಲಿ ಮೊದಲ ಹಂತದ ಲಸಿಕೆ ನೀಡಲಾಗಿದೆ ಮತ್ತು ಅನೇಕರಿಗೆ ಈಗಾಗಲೇ ಎರಡನೇ ಹಂತದ ಲಸಿಕೆಯನ್ನು ಸಹ ನೀಡಲಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)