

ನವದೆಹಲಿ: ಬ್ರೆಜಿಲ್ನಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ(G20 Summit) ಅರ್ಥಪೂರ್ಣ ಚರ್ಚೆಗಳನ್ನು ಎದುರು ನೋಡುತ್ತಿದ್ದೇನೆ. ಕಳೆದ ವರ್ಷ ಭಾರತ ಆಯೋಜಿಸಿದ್ದ ಅಜೆಂಡಾವನ್ನು ಮುಂದುವರಿಸಲು ಈ ಸಮ್ಮೇಳನವು ಅವಕಾಶವನ್ನು ಒದಗಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ(ನವೆಂಬರ್ 16) ಹೇಳಿದ್ದಾರೆ. ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನಾಗೆ ಐದು ದಿನಗಳ ಭೇಟಿಗೆ ಮುನ್ನ ಪ್ರಧಾನಿಮಂತ್ರಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೊದಲು ನೈಜರಿಯಾ ತಲುಪಲಿರುವ ಪ್ರಧಾನಿ ಮೋದಿ ನಂತರ ಬ್ರೆಜಿಲ್ಗೆ ಹೋಗಲಿದ್ದಾರೆ. ಬ್ರೆಜಿಲ್ನಲ್ಲಿ ನಡೆಯಲಿರುವ 19ನೇ ಜಿ-20 ಸಮ್ಮೇಳನದಲ್ಲಿ ನಾನು ಟ್ರೋಕಾ ಸದಸ್ಯನಾಗಿ ಪಾಲ್ಗೊಳ್ಳುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕಳೆದ ವರ್ಷ ಭಾರತದ ಆತಿಥ್ಯವು G20 ಅನ್ನು ಜನರ G20 ಆಗಿ ಮಾಡಿತು ಮತ್ತು ಜಾಗತಿಕ ದಕ್ಷಿಣದ ಆದ್ಯತೆಗಳನ್ನು ತನ್ನ ಕಾರ್ಯಸೂಚಿಯಲ್ಲಿ ಇರಿಸಿತು. ಪ್ರಧಾನಿ ಮೋದಿಯವರಲ್ಲದೆ, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ಅಮೆರಿಕ ಅಧ್ಯಕ್ಷ ಕೂಡ ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಮ್ಮೇಳನವು ರಿಯೊ ಡಿ ಜನೈರೊದಲ್ಲಿ ನವೆಂಬರ್ 18 ಮತ್ತು 19 ರಂದು ನಡೆಯಲಿದೆ. ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾವು ಜಿ-20 ರ ಟ್ರೋಕಾ ಸದಸ್ಯರಾಗಿದ್ದಾರೆ.
ಈ ವರ್ಷ ಬ್ರೆಜಿಲ್ ಭಾರತದ ಪರಂಪರೆಯನ್ನು ಮುನ್ನಡೆಸುತ್ತಿದೆ. 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ದೃಷ್ಟಿಕೋನಕ್ಕೆ ಅನುಗುಣವಾಗಿ ಅರ್ಥಪೂರ್ಣ ಚರ್ಚೆಗಳನ್ನು ನಾನು ಎದುರು ನೋಡುತ್ತಿದ್ದೇನೆ. ನಾನು ಇತರ ನಾಯಕರೊಂದಿಗೆ ಮತ್ತಷ್ಟು ದ್ವಿಪಕ್ಷೀಯ ಸಹಕಾರವನ್ನು ಚರ್ಚಿಸುತ್ತೇನೆ. ಕಳೆದ ವರ್ಷ ಆಫ್ರಿಕನ್ ಯೂನಿಯನ್ ಭಾರತ ಆತಿಥ್ಯ ವಹಿಸಿದ್ದ G-20ನಲ್ಲಿ ಖಾಯಂ ಸದಸ್ಯವಾಯಿತು. ಯೂಕ್ರೆನ್ ಬಿಕ್ಕಟ್ಟಿನ ಬಗ್ಗೆ ಆಳವಾದ ಭಿನ್ನಾಭಿಪ್ರಾಯಗಳ ನಡುವೆಯೂ ಘೋಷಣೆಯನ್ನು ಹೊರಡಿಸುವುದು ಭಾರತದ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ನೈಜೀರಿಯಾಕ್ಕೆ ಪ್ರಧಾನಿ ಮೋದಿಯವರ ಮೊದಲ ಭೇಟಿ ಇದಾಗಿದ್ದು ನವೆಂಬರ್ 16-17ರವರೆಗೆ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ನನಗೆ ಹಿಂದಿಯಲ್ಲಿ ಆತ್ಮೀಯ ಸ್ವಾಗತ ಸಂದೇಶವನ್ನು ಕಳುಹಿಸಿದ ನೈಜೀರಿಯಾದ ಭಾರತೀಯ ಸಮುದಾಯ ಮತ್ತು ಸ್ನೇಹಿತರನ್ನು ಭೇಟಿಯಾಗಲು ನಾನು ಎದುರು ನೋಡುತ್ತಿದ್ದೇನೆ' ಎಂದು ಮೋದಿ ಹೇಳಿದರು. ನವೆಂಬರ್ 19 ರಿಂದ 21 ರವರೆಗೆ ಪ್ರಧಾನಿ ಮೋದಿ ಗಯಾನಾದಲ್ಲಿರಲಿದ್ದಾರೆ. ಐವತ್ತು ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರ ಮೊದಲ ಭೇಟಿ ಇದಾಗಿದೆ. ಹಂಚಿಕೊಂಡ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳ ಆಧಾರದ ಮೇಲೆ ನಮ್ಮ ಅನನ್ಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ನಾವು ಚರ್ಚಿಸುತ್ತೇವೆ' ಎಂದು ಅವರು ಹೇಳಿದರು.(ಏಜೆನ್ಸೀಸ್)