’ಬ್ರ್ಯಾಂಡ್ ಬೆಂಗಳೂರು’ ಯೋಜನೆ 39,000 ಕೋಟಿ ಸಾಲ: ಸೂಕ್ತ ಅಧ್ಯಯನ ನಡೆಸಲು ಡಾ. ಮುಖ್ಯಮಂತ್ರಿ ಚಂದ್ರು ಒತ್ತಾಯ.

chandru
Published on

ಬೆಂಗಳೂರು: ’ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ₹39,000 ಕೋಟಿಯಷ್ಟು ಬೃಹತ್ ಮೊತ್ತವನ್ನು ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಮುಂದಾಗಿರುವ ಕ್ರಮಕ್ಕೆ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಆತಂಕ ವ್ಯಕ್ತಪಡಿಸಿದ್ದು, ಬಿಬಿಎಂಪಿ ಬಜೆಟ್‌ಗಿಂದ ಮೂರ್ನಾಲ್ಕು ಪಟ್ಟು ಹೆಚ್ಚು ಸಾಲ ಮಾಡುವ ಮುನ್ನ ಸರಿಯಾದ ಅಧ್ಯಯನ ನಡೆಸುವಂತೆ ಒತ್ತಾಯಿಸಿದರು.

ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಡಾ. ಮುಖ್ಯಮಂತ್ರಿ ಚಂದ್ರು, 2024-25ರ ಸಾಲಿನ ಬಿಬಿಎಂಪಿ ಬಜೆಟ್ ಗಾತ್ರವೇ ₹12,371 ಕೋಟಿ ಇದ್ದು, ಇದಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಸಾಲ ಪಡೆಯುತ್ತಿರುವುದು ಉತ್ತಮ ನಿರ್ಧಾರವಲ್ಲ. ಸಿಎಂ ಸಿದ್ದರಾಮಯ್ಯ ಕೂಡಲೇ ಇದರತ್ತ ಗಮನ ಹರಿಸಿ, ಬಿಬಿಎಂಪಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕುವುದನ್ನು ತಡೆಯಬೇಕು. ಇಷ್ಟು ದೊಡ್ಡ ಮೊತ್ತದ ಸಾಲ ಪಡೆಯುವ ಮೊದಲ, ಲಾಭ-ನಷ್ಟ, ದೀರ್ಘಕಾಲದಲ್ಲಿ ಆಗಬಹುದಾದ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಬೇಕು ಎಂದು ಪತ್ರದ ಮೂಲಕ ಆಗ್ರಹಿಸಿದರು.

ಜನರಿಗೆ ಮಾಹಿತಿ ಕೊಡಲಿ

ಯಾವ ಆಧಾರಾದ ಮೇಲೆ ಇಷ್ಟು ದೊಡ್ಡ ಮೊತ್ತದ ಸಾಲ ಪಡೆಯಲಾಗುತ್ತಿದೆ. ಸಾಲ ಪಡೆಯಲು ಬಿಬಿಎಂಪಿ ಯಾವ ಆಸ್ತಿಯನ್ನು ಅಡಮಾನ ಇಡುತ್ತಿದೆ ಎನ್ನುವ ವಿಚಾರವನ್ನು ಸಾರ್ವಜನಿಕರಿಗೆ ತಿಳಿಸಲಿ. ಬಿಬಿಎಂಪಿ ಈಗಾಗಲೇ ಮುಗಿದಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಸುಮಾರು ₹6000 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದೆ. ಈಗ ಮತ್ತೆ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ಸಾಲ ಮಾಡಿ ಅದನ್ನು ಬೆಂಗಳೂರು ಜನರ ಮೇಲೆ ಹೊರಿಸುವುದು ಸರಿಯಲ್ಲ ಎಂದರು.

ದೊಡ್ಡ ಮಟ್ಟದ ಯೋಜನೆಗಳನ್ನು ಅನುಷ್ಠಾನ ಮಾಡುವ ಮುನ್ನ, ಅವುಗಳಿಂದ ದೀರ್ಘಕಾಲದಲ್ಲಿ ಆಗಬಹುದಾದ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಬೇಕು, ಏನೂ ಮಾಡದೇ ಇಷ್ಟು ದೊಡ್ಡ ಮಟ್ಟದಲ್ಲಿ ಸಾಲ ಮಾಡಿ, ಅದನ್ನು ಜನರ ಮೇಲೆ ಹೊರಿಸಬೇಡಿ ಎಂದು ಒತ್ತಾಯಿಸಿದರು.

ಮೂಲಭೂತ ಸೌಕರ್ಯಗಳಿಗೆ ಆದ್ಯತೆ ಕೊಡಿ

ಬೃಹತ್ ಯೋಜನೆಗಳನ್ನು ಕೈಗೊಳ್ಳುವ ಮುನ್ನ ಬೆಂಗಳೂರಿನ ಮೂಲಭೂತ ಸೌಕರ್ಯಗಳಿಗೆ ಮೊದಲು ಆದ್ಯತೆ ಕೊಡಬೇಕು. ರಸ್ತೆಗುಂಡಿಗಳನ್ನು ಮುಚ್ಚುವುದು, ರಸ್ತೆಗಳ ಮರು ಡಾಂಬರೀಕರಣ, ಸುರಕ್ಷಿತ ಪಾದಚಾರ ಮಾರ್ಗಗಳ ನಿರ್ಮಾಣ, ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ಮೊದಲು ಗಮನ ಕೊಡಲಿ. ನಗರದಲ್ಲಿ ದಿನೇ ದಿನೇ ಟ್ರಾಫಿಕ್ ಸಮಸ್ಯೆ ಮಿತಿ ಮೀರುತ್ತಿದ್ದು, ಬಿಎಂಟಿಸಿ ಬಸ್ ಸಂಖ್ಯೆ ಹೆಚ್ಚಿಸುವುದು, ಮೆಟ್ರೊ ರೈಲು ಮಾರ್ಗದ ವಿಸ್ತರಣೆ ಮಾಡಲಿ. ಹಲವು ವರ್ಷಗಳಿಂದ ಕುಂಟುತ್ತಾ ಸಾಗಿರುವ ಕಾಮಗಾರಿಗಳನ್ನು ಮೊದಲು ಪೂರ್ಣಗೊಳಿಸುವ ಬಗ್ಗೆ ಬಿಬಿಎಂಪಿ ಮತ್ತು ಸರ್ಕಾರ ಆದ್ಯತೆ ಕೊಡಲಿ ಎಂದರು.

ಸ್ಕೈಡೆಕ್‌ನಂತಹ ಆಡಂಬರದ ಯೋಜನೆ ಬೆಂಗಳೂರಿಗೆ ಅಗತ್ಯವಿಲ್ಲ. ಇಂತಹ ಯೋಜನೆಗಳಿಂದ ಜನಸಾಮಾನ್ಯರಿಗೆ ಯಾವ ಪ್ರಯೋಜನವೂ ಇಲ್ಲ. ಇಂತಹ ಆಡಂಬರದ ಯೋಜನೆಗಳಿಗೆ ಹಣ ಪೋಲು ಮಾಡುವ ಬದಲು, ನಗರದಲ್ಲಿ ಆಗಬೇಕಾದ ತುರ್ತಾದ ಯೋಜನೆಗಳಿಗೆ ಹಣ ಬಳಕೆ ಮಾಡಲಿ. ತಮ್ಮ ಪ್ರತಿಷ್ಠೆಗಾಗಿ ಇಂತಹ ಯೋಜನೆಗಳನ್ನು ರೂಪಿಸುವುದನ್ನು ನಿಲ್ಲಿಸಲಿ ಎಂದರು. ಸಾಲ ಮಾಡಿ ಇಂತಹ ಯೋಜನೆ ಅನುಷ್ಠಾನ ಮಾಡುವ ಮುನ್ನ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಮರುಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net