ಬಿಪಿಎಲ್ ಪಡಿತರ ಚೀಟಿದಾರರ ಖಾತೆಗೆ ಇನ್ನೊಂದು ವಾರದಲ್ಲಿ ಹಣ ಜಮಾ

kh muniyappa
Published on

ಬೆಂಗಳೂರು: ಬಿಪಿಎಲ್ ಪಡಿತರ ಚೀಟಿದಾರರಿಗೆ ಆಗಸ್ಟ್‌ನಲ್ಲಿ ತಲಾ ಐದು ಕೆಜಿ ಅಕ್ಕಿಯ ಹಣ ಇನ್ನೊಂದು ವಾರದಲ್ಲಿ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಅಕ್ಕಿಯಾದರೆ ಪ್ರತಿ ತಿಂಗಳು 10 ಅಥವಾ 11ನೇ ತಾರೀಖಿಗೆ ವಿತರಿಸಲಾಗುತ್ತಿತ್ತು ಎಂದು ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು ನಗದು ಮೊತ್ತ ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕಾಗಿದೆ. ತಾಂತ್ರಿಕ ಸಮಸ್ಯೆಗಳು ಬಗೆಹರಿಸಿದ್ದು, ಒಂದು ಬಟನ್ ಒತ್ತಿದರೆ ಸಾಕು ಎಲ್ಲ ಅರ್ಹ ಲಾನುಭವಿಗಳ ಖಾತೆಗೆ ಪಾವತಿ ವ್ಯವಸ್ಥೆಯಾಗಿದೆ.

ತಲಾ ಐದು ಕೆಜಿ ಅಕ್ಕಿ ವಿತರಿಸಲು ಮಾಸಿಕ ಎರಡೂವರೆ ಲಕ್ಷ ಟನ್ ಅಕ್ಕಿ ಅಗತ್ಯವಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶ ಕೆಜಿಗೆ 39 ರಿಂದ 40 ರೂ.ನಂತೆ ಪೂರೈಸಲು ಒಲವು ವ್ಯಕ್ತಪಡಿಸಿವೆ. ರಾಜ್ಯದ ಗೋದಾಮುಗಳಿಗೆ ಅಂತಿಮವಾಗಿ ಎಷ್ಟು ದರಕ್ಕೆ ವಿಲೇವಾರಿ ಮಾಡುವಿರಿ ಎಂದು ಕೇಳಿದ್ದು, ನಿಖರ ಬೆಲೆ ತಿಳಿಸಿದ ನಂತರ ಸರ್ಕಾರ ಮುಂದಿನ ಕ್ರಮವಹಿಸಲಿದೆ ಎಂದರು.

ಹೊಸದಾಗಿ ಬಿಪಿಎಲ್ ಪಡಿತರ ಚೀಟಿ ಬಯಸಿ ಮೂರು ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಬಗ್ಗೆ ತಪಾಸಣೆ, ವಿಚಾರಣೆ ಮಾಡಿದ ನಂತರ ವೈದ್ಯಕೀಯ ಉದ್ದೇಶಕ್ಕೆ ಮಾತ್ರ ಹೊಸ ಬಿಪಿಎಲ್ ಪಡಿತರ ಚೀಟಿ ವಿತರಿಸುವ ಆಲೋಚನೆಯಿದೆ.

ಚಾಲ್ತಿ ಬಿಪಿಎಲ್, ಎಪಿಎಲ್ ಪಡಿತರ ಚೀಟಿಗಳ ತಿದ್ದುಪಡಿ, ಮನೆ ಯಜಮಾನಿ ಬದಲಾವಣೆ, ಹೊಸ ಹೆಸರು ಸೇರ್ಪಡೆ ಅಥವಾ ಕೈಬಿಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net