ಗಣಪತಿ ಮೆರವಣಿಗೆ ಮೇಲೆ ಉಗುಳಿದ ಬಾಲಕರು

sgr ganapati (1)
ಜೈ ಭುವನೇಶ್ವರಿ ಯುವಕ ಸಂಘ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿ.
Published on

ಸಾಗರ: ನಗರದಲ್ಲಿ ಭಾನುವಾರ ಜನ್ನತ್ ಗಲ್ಲಿ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ಸಂದರ್ಭ ಬಾಲಕರಿಬ್ಬರು ಮನೆಯ ಟೆರೆಸ್ ಮೇಲಿಂದ ಮೆರವಣಿಗೆ ಮೇಲೆ ಉಗಿದ ವಿಡಿಯೋ ವೈರಲ್ ಆಗಿದೆ.

ಜೈ ಭುವನೇಶ್ವರಿ ಯುವಕ ಸಂಘ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯನ್ನು ರಾಜಬೀದಿ ಉತ್ಸವ ಮಾಡಲಾಗುತ್ತಿತ್ತು. ಈ ಸಂದರ್ಭ ಮುಸ್ಲಿಮ್ ಸಮುದಾಯದ ಬಾಲಕರಿಬ್ಬರು ಮನೆಯ ಮೇಲಿನಿಂದ ಉಗಿಯುತ್ತಿರುವಂತಹ ವಿಡಿಯೋ ವೈರಲ್ ಆಗಿತ್ತು. ಆಗ ಹಿಂದುಪರ ಸಂಘಟನೆಗಳು ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದವು. ಗಣೇಶ ಮೂರ್ತಿಗೆ ಅಪಮಾನ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಾರ್ಯಕರ್ತರು ಒತ್ತಾಯಿಸಿದರು.

ವಿಡಿಯೋ ವೈರಲ್ ಆದ ಬೆನ್ನಲ್ಲೇ ಚಿಕ್ಕ ಮಕ್ಕಳು ತಿಳಿಯದೆ ತಪ್ಪು ಮಾಡಿದ್ದಾರೆ. ಅವರ ಪರವಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಪಾಲಕರು ಕ್ಷಮೆಯಾಚಿಸಿದ್ದಾರೆ.

ವೈರಲ್ ಆಗಿರುವಂತ ವಿಡಿಯೋದಲ್ಲಿ ಇಬ್ಬರು ಬಾಲಕರಲ್ಲಿ ಓರ್ವ ಮೆರವಣಿಗೆ ಮೇಲೆ ಉಗಿದಿರುವುದು ಕಂಡುಬಂದಿದೆ. ಆ ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದೆ. ಘಟನೆಗೆ ಸಂಬಂಧಿಸಿ ಮಕ್ಕಳ ಪಾಲಕರು ಕ್ಷಮೆಯಾಚಿಸಿದ್ದಾರೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಸುದ್ದಿಗಾರರಿಗೆ ತಿಳಿಸಿದರು. ಈಗಾಗಲೇ ಹಿಂದುಪರ ಸಂಘಟನೆಯ ಮುಖಂಡರಿಗೂ ವಿಷಯವನ್ನು ಮನವರಿಕೆ ಮಾಡಿಕೊಡಲಾಗಿದೆ. ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ತನಿಖೆಗೆ ಒತ್ತಾಯ: ಘಟನೆಗೆ ಸಂಬಂಧಿಸಿ ಬಿಜೆಪಿ, ವಿಶ್ವ ಹಿಂದು ಪರಿಷತ್, ಬಜರಂಗದಳ ಕಾರ್ಯಕರ್ತರು ಎಸ್ಪಿ ಅವರನ್ನು ಭೇಟಿ ಮಾಡಿ ತನಿಖೆ ನಡೆಸುವಂತೆ ಒತ್ತಾಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ, ಮೆರವಣಿಗೆ ಸಂದರ್ಭ ಮುಸ್ಲಿಮ್ ಸಮುದಾಯದ ಬಾಲಕರು ಈ ರೀತಿ ವರ್ತಿಸಲು ಕಾರಣವೇನು? ಅವರಿಗೆ ಇಂತಹ ಮನಸ್ಥಿತಿ ಏಕೆ ಬಂತು? ಎನ್ನುವ ಬಗ್ಗೆ ಗೊತ್ತಾಗಬೇಕು. ಜಿಲ್ಲೆಯಲ್ಲಿ ಇನ್ನೂ ಅನೇಕ ಗಣಪತಿಗಳ ವಿಸರ್ಜನೆ ಆಗಬೇಕಿದೆ. ಈ ಬಗ್ಗೆ ಕುಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು. ಟಿ.ಡಿ.ಮೇಘರಾಜ್, ಗಣೇಶ್‌ಪ್ರಸಾದ್, ಮಲ್ಲಿಕಾರ್ಜುನ್ ಹಕ್ರೆ ಇತರರಿದ್ದರು.

ಇಂತಹ ಘಟನೆಗಳು ಯಾವ ಕಾರಣಕ್ಕೂ ನಡೆಯಬಾರದು. ಈ ಘಟನೆಯ ಹಿಂದಿರುವಂತಹ ವಿಚಾರಗಳ ಬಗ್ಗೆಯೂ ತನಿಖೆ ಮಾಡಲು ಎಸ್ಪಿ ಅವರಿಗೆ ತಿಳಿಸಿದ್ದೇನೆ. ಇಲ್ಲಿ ಗಣಪತಿ ಪ್ರತಿಷ್ಠಾಪಿಸಿರುವ ಸಂಘಟನೆ ಪದಾಧಿಕಾರಿಗಳೊಂದಿಗೂ ಮಾತನಾಡಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತನಿಖೆ ನಡೆಸುವಂತೆ ಹೇಳಿದ್ದೇನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net