ಭದ್ರಾ ನಾಲೆಯಲ್ಲಿ ಮುಳುಗಿ ಬಾಲಕರ ಸಾವು

crime
ಶವಗಳಿಗಾಗಿ ಶೋಧಕಾರ್ಯ ನಡೆಸುತ್ತಿರುವ ಈಜುಗಾರರು.
Published on

ಹೊಳೆಹೊನ್ನೂರು: ಸಮೀಪದ ಗುಡುಮಗಟ್ಟೆಯಲ್ಲಿ ಸೋಮವಾರ ಇಬ್ಬರು ಬಾಲಕರು ಭದ್ರಾ ನಾಲೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಆನವೇರಿಯ ಉಮೇಶ್ ಶೆಟ್ಟಿ ಮಗ ರಜತ್ (10), ಕುಂದಾಪುರದ ತೆಕ್ಕಟೆ ನಿವಾಸಿ ನವೀನ್ ಶೆಟ್ಟಿ ಅವರ ಮಗ ರೋಹನ್ (15) ಮೃತ ದುರ್ದೈವಿಗಳು.

ರಜತ್ 4ನೇ ತರಗತಿ ಓದುತ್ತಿದ. ರೋಹನ್ ತೆಕ್ಕಟೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ. ಕುಂದಾಪುರ ಮೂಲದ ಉಮೇಶ್ ಶೆಟ್ಟಿ ದಂಪತಿ ಆನವೇರಿ ಬಸ್ ನಿಲ್ದಾಣದ ಬಳಿ ಹೋಟೆಲ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ರಜೆ ಕಳೆಯಲು ಕುಂದಾಪುರದಿಂದ ಆನವೇರಿಯ ಅತ್ತೆ ಮನೆಗೆ ರೋಹನ್ ಬಂದಿದ್ದ.
ನಾಲೆಯಲ್ಲಿ ಆಟವಾಡಲೆಂದು ರಜತ್ ಹಾಗೂ ರೋಹನ್ ಗುಡುಮಗಟ್ಟೆ ಮೂಲದ ಪರಿಚಯಸ್ಥರೊಂದಿಗೆ ಸೋಮವಾರ ಮಧ್ಯಾಹ್ನ ತೆರಳಿದ್ದರು. ಮೊದಲು ಬಾಲಕರು ಭದ್ರಾ ಉಪ ನಾಲೆ ಪಕ್ಕದ ಕಿರುಕಾಲುವೆಯಲ್ಲಿ ಆಟವಾಡಿದ್ದಾರೆ. ರೋಹನ್ ಸ್ನಾನ ಮಾಡದೆ ರಜತ್‌ನಿಗೆ ಸ್ನಾನ ಮಾಡಿಸಿ ಕೆಲಹೊತ್ತು ನೀರಲ್ಲಿ ಆಟವಾಡಿದ್ದಾರೆ. ಇವರ ಜತೆಗಿದ್ದ ಪರಿಚಯಸ್ಥರು ಮಕ್ಕಳಿಗೆ ಕಾಲುವೆಯಲ್ಲಿ ಆಟವಾಡುವಂತೆ ತಿಳಿಸಿ ಅಲ್ಲೇ ಪಕ್ಕದಲ್ಲಿದ್ದ ಮನೆಯಿಂದ ಹಸುವನ್ನು ಹೊಡೆದುಕೊಂಡು ಬರಲು ಹೋಗಿದ್ದಾರೆ. ಅಷ್ಟರಲ್ಲಿ ಮಕ್ಕಳು ಕಾಲುವೆಯಿಂದ ಮೇಲೆದ್ದು ಭದ್ರಾ ನಾಲೆಯ ಕಡೆಗೆ ಹೋಗಿ, ಆಯಾತಪ್ಪಿ ನಾಲೆಯಲ್ಲಿ ಬಿದ್ದು ನಾಪತ್ತೆಯಾಗಿದ್ದರು.
ವಿಷಯ ತಿಳಿದು ಸ್ಥಳೀಯ ಈಜುಗಾರರು ನಾಲೆಯಲ್ಲಿ ಹುಡುಕಾಟ ನಡೆಸಿದ್ದಾರೆ. ನಾಲೆಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಸಂಜೆ ವೇಳೆಗೆ ನಾಲೆಯಲ್ಲಿ ನೀರಿನ ಹರಿವನ್ನು ಕಡಿಮೆ ಮಾಡಿಸಿ ಹುಡುಕಾಟ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರ ತಂಡಕ್ಕೆ ಗುಡುಮಗಟ್ಟೆ ಸೇತುವೆ ಬಳಿ ಮಕ್ಕಳ ಶವಗಳು ಪತ್ತೆಯಾಗಿವೆ. ಕಾಲುವೆಯಿಂದ ಕೈ ಹಿಡಿದುಕೊಂಡೇ ಮೇಲೆ ಬಂದಿರುವ ಮಕ್ಕಳು ಕೈ ಹಿಡಿದುಕೊಂಡೇ ನಾಲೆಗೆ ಬಿದ್ದಿದ್ದಾರೆ. ಶವಗಳನ್ನು ಮೇಲೆತ್ತಿದಾಗಲೂ ಪರಸ್ಪರ ಕೈ ಹಿಡಿದುಕೊಂಡ ಸ್ಥಿತಿಯಲ್ಲಿದ್ದರು. ಇದನ್ನು ನೋಡಿದ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಇದ್ದದ್ದು ಒಬ್ಬನೇ ಮಗ: ಕುಂದಾಪುರ ತೆಕ್ಕಟೆಯ ನವೀನ್ ಶೆಟ್ಟಿ ಅವರಿಗೆ ರೋಹನ್ ಒಬ್ಬನೇ ಮಗ. ಕೆಲ ದಿನಗಳ ಹಿಂದಷ್ಟೇ ನವೀನ್ ಶೆಟ್ಟಿ ಸಾವಿಗೀಡಾಗಿದ್ದರು. ತಾಯಿಗೆ ಆಸರೆಯಾಗಬೇಕಿದ್ದ ಇದ್ದೊಬ್ಬ ಮಗನನ್ನು ಕಳೆದುಕೊಂಡ ಸಂಬಂಧಿಗಳ ಗೋಳು ಮುಗಿಲು ಮುಟ್ಟಿತ್ತು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಕುಂದಾಪುರಕ್ಕೆ ತೆಗೆದುಕೊಂಡು ಹೋಗಿ ಮಂಗಳವಾರ ಅಂತ್ಯಕ್ರಿಯೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net