

ಬೆಂಗಳೂರು: ಜೋಳಿಗೆಯಲ್ಲಿ ಕುಳಿತು ಆನ್ಲೈನ್ ಪಾಠ ಕೇಳುತ್ತಿದ್ದ ಹತ್ತು ವರ್ಷದ ಬಾಲಕನ ಪಾಲಿಗೆ ಅದೇ ಜೋಳಿಗೆ ಮೃತ್ಯುವಾಗಿ ಪರಿಣಮಿಸಿದೆ.
ನಗರ ಹೊರವಲಯದ ದರ್ಗಾಜೋಗಹಳ್ಳಿಯ ಮಂಜುನಾಥ್ ಅವರ ಪುತ್ರ ವಿಶ್ವಾಸ್, ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ. ಮನೆಯಲ್ಲಿದ್ದ ಎರಡು ವರ್ಷದ ಮತ್ತೊಂದು ಮಗುವನ್ನು ಮಲಗಿಸಲು ಕೋಣೆಯಲ್ಲಿ ಜೋಳಿಗೆ ಕಟ್ಟಲಾಗಿತ್ತು. ನಿನ್ನೆ ಆನ್ಲೈನ್ ತರಗತಿಗೆ ಹಾಜರಾದ ಬಾಲಕ, ಕೋಣೆಯಲ್ಲಿ ಕುಳಿತು ಪಾಠ ಕೇಳುತ್ತಿದ್ದ. ಸಂಜೆಯಾದರೂ ಆತ ಕೋಣೆಯಿಂದ ಹೊರ ಬಾರಲಿಲ್ಲ. ಅನುಮಾನಗೊಂಡು ಪಾಲಕರು ನೋಡಿದಾಗ ಆಘಾತ ಕಾದಿತ್ತು.
ಆನ್ಲೈನ್ ಪಾಠ ಕೇಳಲೆಂದು ಕೋಣೆಗೆ ಹೋದ ಬಾಲಕ ಮಗುವಿಗೆ ಕಟ್ಟಿದ್ದ ಜೋಕಾಲಿ ಮೇಲೆ ಕುಳಿತು ಮೈಮರೆತ್ತಿದ್ದಾನೆ. ಈ ವೇಳೆ ಜೋಕಾಲಿಯ ಉರುಳಿಗೆ ಬಾಲಕನ ಕತ್ತು ಸಿಲುಕಿ ಸ್ಥಳದಲ್ಲೇ ಅಸುನೀಗಿದ್ದಾನೆ.
ಆನ್ಲೈನ್ ತರಗತಿಯ ಸಮಯ ಮುಗಿದರೂ ಮಗು ಹೊರಬಾರದಿದ್ದಾಗ ಘಟನೆ ಬೆಳಕಿಗೆ ಬಂದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.