ವರನ ಕುತ್ತಿಗೆಯಲ್ಲಿದ್ದ 2 ಲಕ್ಷ ರೂ. ಮೌಲ್ಯದ ನೋಟಿನ ಹಾರವನ್ನೇ ಕಸಿದು ಪರಾರಿಯಾದ 14 ವರ್ಷದ ಬಾಲಕ!

Boy snatches money garland off groom’s neck
Published on

ನವದೆಹಲಿ: ಅಲ್ಲಿ ಸೇರಿದ್ದ ಎಲ್ಲರೂ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಮದುವೆ ಗಂಡು ವಿಭಿನ್ನವಾಗಿ ಸಿದ್ಧತೆ ಮಾಡಿಕೊಂಡಿದ್ದ. ಕೊರಳಿಗೆ ಹೂವು, ಚಿನ್ನದ ಹಾರದ ಬದಲಿಗೆ ನೋಟಿನ ಹಾರ ಹಾಕಿಕೊಂಡಿದ್ದ. ಕುತ್ತಿಗೆಯಲ್ಲಿ ನೋಟಿನ ಹಾರ ಹಾಕಿ, ಕುದುರೆ ಏರಿ ಮದುವೆ ಮಂಟಪಕ್ಕೆ ಆಗಮಿಸಲು ತಯಾರಿ ನಡೆಸುತ್ತಿದ್ದ. ಆದರೆ ಕೊನೆಯ ಕ್ಷಣದಲ್ಲಿ ಆಗಿದ್ದೇ ಬೇರೆ. ವರನ ಕುತ್ತಿಗೆಯಲ್ಲಿದ್ದ ನೋಟಿನ ಹಾರ ಬಾಲಕನೊಬ್ಬನ ಕಣ್ಣು ಕುಕ್ಕಿದೆ. ಬಾಲಕ ಮದುವೆ ಗಂಡಿನ ಕುತ್ತಿಯಲ್ಲಿದ್ದ 500 ರೂ. ನೋಟಿನಿಂದ ಮಾಡಿದ ಹಾರವನ್ನು ಕಸಿದು ಪರಾರಿಯಾಗಿದ್ದಾನೆ.

ಮದುವೆ ಗಂಡಿನ ಕುತ್ತಿಗೆಯಲ್ಲಿದ್ದ ನೋಟಿನ ಹಾರವನ್ನು 14 ವರ್ಷದ ಬಾಲಕನೊಬ್ಬ ಎಗರಿಸಿದ್ದಾನೆ. ಸದ್ಯ ಈ ಘಟನೆಯ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಬಾಲಕ ವರನ ಕುತ್ತಿಗೆಲ್ಲಿದ್ದ ನೋಟಿನ ಹಾರವನ್ನು ಗಮನಿಸಿದ್ದಾನೆ. ಮದುವೆ ಗಂಡು ಕುದರೆ ಸವಾರಿ ಮಾಡಲು ಹೊರಟಿದ್ದಾಗ 500 ರೂ. ನೋಟುಗಳಿಂದ ಮಾಡಿದ್ದ ಹಾರವನ್ನು ಕಿತ್ತಕೊಂಡು ಓಡಿ ಹೋಗಿದ್ದಾನೆ ಎಂದು ಹೇಳಿರುವುದು ವರದಿಯಾಗಿದೆ.

ನೋಟಿನ ಹಾರದಲ್ಲಿ 500ರೂ. ಮುಖಬೆಲೆಯೆ 2 ಲಕ್ಷ ರೂಪಾಯಿ ಮೌಲ್ಯದ ನೋಟುಗಳಿದ್ದವು ಎನ್ನಲಾಗಿದೆ. ಈ ಘಟನೆ ಪಶ್ಚಿಮ ದೆಹಲಿಯ ಮಾಯಾಪುರಿಯಲ್ಲಿ ಗುರುವಾರ ರಾತ್ರಿ ಬ್ಯಾಂಕ್ವೆಟ್ ಹಾಲ್‌ನ ಹೊರಗೆ ನಡೆದಿದೆ. ಬಾಲಕ ನೋಟಿನ ಹಾರವನ್ನು ಕಸಿದುಕೊಂಡು ಹತ್ತಿರದಲ್ಲಿದ್ದ ಕಾಡಿನ ದಾರಿಯಲ್ಲಿ ಪರಾರಿಯಾಗಿದ್ದಾನೆ. ಕೂಡಲೇ ನಾವು ಅವನನ್ನು ಬೆನ್ನಟ್ಟಿದೆವು ಎಂದು ಮದುವೆ ಗಂಡಿನ ಸಹೋದರ ಇಮ್ರಾನ್ ಖಾನ್ ಹೇಳಿದ್ದಾನೆ.

ಕೂಡಲೇ ವರನ ಕಡೆಯವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಬಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯವಾಳಿಗಳನ್ನು ಪರಿಶೀಲಿಸಿ, ಬಾಲಕನ ಪತ್ತೆ ಹಚ್ಚುವ ಕೆಲಸ ಮಾಡಿದ್ದಾರೆ. ವರದಿಯ ಪ್ರಕಾರ 329 ನೋಟುಗಳನ್ನು ಬಳಸಿ ನೋಟಿನ ಹಾರ ತಯಾರಿಸಲಾಗಿತ್ತು. ಬಾಲಕ ವರದನ ಕುತ್ತಿಗೆಯಿಂದ ಹಾರವನ್ನು ಎಳೆದುಕೊಳ್ಳುವ ವೇಳೆ ಕೆಲವು ನೋಟುಗಳು ಚೆಲ್ಲಾಪಿಲ್ಲಿಯಾಗಿವೆ. ಸದ್ಯ 500 ರೂ. ಮುಖಬೆಲೆಯ 79 ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net