ಸಿಲಿಂಡರ್ ಸ್ಫೋಟಕ್ಕೆ ಛಿದ್ರವಾಗಿ ಹೋಯ್ತು ಬಾಲಕನ ದೇಹ!

Biy Died
Published on

ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು 13 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಹೆಬ್ಬಾಳ ಸಮೀಪದ ಗುಡ್ಡದಹಳ್ಳಿಯಲ್ಲಿ ಇಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ನಡೆದಿದೆ. ಆರನೇ ತರಗತಿಯಲ್ಲಿ ಓದುತಿದ್ದ ಮಹೇಶ್(13) ಸಾವನ್ನಪ್ಪಿದ ಬಾಲಕ.

ಸಿಲಿಂಡರ್ ಫಿಲ್ಲಿಂಗ್ ಅಂಗಡಿಯಲ್ಲಿ ಘಟನೆ ನಡೆದಿದ್ದು, ಅಂಗಡಿ ಪಕ್ಕದಲ್ಲಿ ಬಾಲಕ ಮಹೇಶ್ ನಿಂತಿದ್ದ. ಸ್ಫೋಟದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಸಿಲಿಂಡರ್ ರೀ ಫಿಲ್ಲಿಂಗ್ ಮಾಡುವ ಗೋಡೌನ್​ ದೇವರಾಜ್ ಎಂಬುವರಿಗೆ ಸೇರಿದೆ. ಘಟನೆಯ ಬೆನ್ನಲ್ಲೆ ಗ್ಯಾಸ್ ರೀ ಫಿಲ್ಲಿಂಗ್ ಮಾಡುತ್ತಿದ್ದ ಲಿಯಾಕತ್ ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ ಲಿಯಾಕತ್ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಬಾಲಕ ಮಹೇಶ್ ಚೋಳನಾಯಕನಹಳ್ಳದಲ್ಲಿರುವ ಸರ್ಕಾರಿ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ. ಬಾಲಕನ ಹೆತ್ತವರು ಕಳೆದ ಎಂಟು ವರ್ಷಗಳಿಂದ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net