

ಬೆಂಗಳೂರು: ಸಿ.ಕೆ ಅಚ್ಚುಕಟ್ಟುವಿನಲ್ಲಿ ಇತ್ತೀಚೆಗೆ ನಡೆದಿದ್ದ ೭ನೇ ತರಗತಿ ಬಾಲಕನ ಗಾಂಧಾರ್(೧೩) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಸ್ಫೋಟಕ ವಿಚಾರವೊಂದು ಬೆಳಕಿಗೆ ಬಂದಿದೆ.
ಜಪಾನೀಸ್ ಭಾಷೆಯ ವೆಬ್ ಸಿರೀಸ್ ಹುಚ್ಚಿನಿಂದ ಬಾಲಕ ಆತ್ಮಹತ್ಯೆ ಮಾಡುಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಈ ಬಗ್ಗೆ ಸಿ.ಕೆ ಅಚ್ಚುಕಟ್ಟು ಪೊಲೀಸರಿಂದ ತನಿಖೆ ಮುಂದುವರಿದಿದೆ.
ಸಂಗೀತಗಾರ ಗಣೇಶ್ ಪ್ರಸಾದ್ ಮತ್ತು ಜಾನಪದ ಗಾಯಕಿ ಸವಿತಾ(ಸವಿತಕ್ಕ) ಅವರ ಎರಡನೇ ಪುತ್ರ ಗಾಂಧಾರ್ ಆ.೪ರಂದು ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಮೊದಲಿಗೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿರಲಿಲ್ಲ. ಆದರೆ ಇದೀಗ ಸಿ.ಕೆ ಅಚ್ಚುಕಟ್ಟು ಪೊಲೀಸರು ಪ್ರಾಥಮಿಕ ತನಿಖೆ ವೇಳೆ ಬಾಲಕನ ಸಾವಿಗೆ ಜಪಾನೀಸ್ ವೆಬ್ ಸಿರೀಸ್ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಏಕೆಂದರೆ ಆತನ ರೂಮ್ನಲ್ಲಿ ವೆಬ್ ಸಿರೀಸ್ ಪಾತ್ರದ ಚಿತ್ರ ಬರೆದಿದ್ದ ಎಂದು ಮೂಲಗಳು ತಿಳಿಸಿವೆ.
ವೆಬ್ ಸಿರೀಸ್‌ನಿಂದ ಪ್ರಾಣಕ್ಕೆ ಕುತ್ತು?
ಗಾಂಧಾರ್, ಮನೆಯಲ್ಲಿ ಒಂಟಿಯಾಗಿ ಇದ್ದಾಗಲೆಲ್ಲ ಜಪಾನೀಸ್ ಭಾಷೆಯ ‘ಡೆತ್‌ನೋಟ್’ ಎಂಬ ವೆಬ್ ಸಿರೀಸ್ ನೋಡುತ್ತಿದ್ದ. ಇದರಿಂದ ಪ್ರೇರಣೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರ ತನಿಖೆ ವೇಳೆ ಈ ವಿಚಾರ ಬಯಲಾಗಿದೆ. ಸದ್ಯ ಪೊಲೀಸರು ತನಿಖೆ ಮುಂದುವರಿಸಿದ್ದು, ಬಾಲಕ ಬಳಸುತ್ತಿದ್ದ ಮೊಬೈಲ್ ಮತ್ತು ಪಾಲಕರನ್ನು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮತ್ತೊಂದೆಡೆ ಶಾಲೆಯಲ್ಲಿ ಗಾಂಧಾರ್ ಬಾಲಕಿಯೊಬ್ಬಳಿಗೆ ‘ಡುಮ್ಮಿ’ ಎಂದು ಚುಡಾಯಿಸುತ್ತಿದ್ದ ವಿಚಾರ ಗೊತ್ತಾಗಿತ್ತು. ಆ ಆಯಾಮದಲ್ಲಿಯೂ ತನಿಖೆ ನಡೆಸಲಾಗಿದ್ದು, ಆ ಬಾಲಕಿ ಅದನ್ನು ಸಹಜವಾಗಿಯೇ ತೆಗೆದುಕೊಂಡಿದ್ದಳು. ಈ ಸಂಬಂಧ ಆಕೆ ಶಾಲೆಯ ಆಡಳಿತ ಮಂಡಳಿಗೆ ಯಾವುದೇ ದೂರು ನೀಡಿರುವುದು ಕಂಡು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?
ಬಾಲಕನ ತಾಯಿ ಸವಿತಾ ಕಾರ್ಯಕ್ರಮ ನಿಮಿತ್ತ ಆಸ್ಟ್ರೇಲಿಯಾಗೆ ತೆರಳಿದ್ದರು. ತಂದೆ, ಅಣ್ಣನ ಜತೆ ಚೆನ್ನಾಗಿಯೇ ಇದ್ದ ಗಾಂಧಾರ್, ರಾತ್ರಿ ಅಪ್ಪ, ಅಣ್ಣ ಜತೆ ಊಟ ಮಾಡಿ ರೂಮ್ನಲ್ಲಿ ಮಲಗಿದ್ದ. ಶಾಲೆಗೆ ಕಳುಹಿಸಲು ಬೆಳಗ್ಗೆ ಬಾಲಕನ ತಂದೆ ಆತನನ್ನು ಎಬ್ಬಿಸಲು ಹೋದಾಗ, ಗಿಟಾರ್‌ನ ತಂತಿಯಿಂದ ನೇಣು ಬಿಗಿದುಕೊಂಡು ಗಾಂಧಾರ್ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿತ್ತು. ಗಾಂಧಾರ್ ಡೆತ್‌ನೋಟ್ ಕೂಡ ಬರೆದಿದ್ದ ಅದರಲ್ಲಿ ಪಾಲಕರ ಮತ್ತು ಸ್ನೇಹಿತರ ಕ್ಷಮೆ ಕೇಳಿದ್ದ.