ಅಮ್ಮಾ, ನಾನು ಚಿಪ್ಸ್ ಕದ್ದಿಲ್ಲಮ್ಮಾ ಎಂದು ಡೆತ್‌ನೋಟ್​​ನಲ್ಲಿ ಬರೆದಿಟ್ಟು ಬಾಲಕ ಆತ್ಮಹತ್ಯೆ | Bengal

Bengal
Published on

Bengal: ಅಮ್ಮಾ, ನಾನು ಚಿಪ್ಸ್ ಕದ್ದಿಲ್ಲಮ್ಮಾ ಎಂದು ಡೆತ್‌ನೋಟ್ ಬರೆದಿಟ್ಟು 7ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ಬಂಗಾಳದ ಮೇದಿನಿಪುರದಲ್ಲಿ ಗುರುವಾರ (ಮೇ.22) ನಡೆದಿದೆ.

ಕಳ್ಳತನದ ಆರೋಪದ ಮೇಲೆ ಸ್ಥಳೀಯ ಅಂಗಡಿಯವನಿಂದ ಸಾರ್ವಜನಿಕವಾಗಿ ಅವಮಾನಕ್ಕೊಳಗಾಗಿದ್ದ 13 ವರ್ಷದ ಬಾಲಕ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪನ್ಸ್ಕುರಾದ ಬಕುಲ್ಡಾ ಪ್ರೌಢಶಾಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿ ಕೃಷ್ಣೇಂದು ದಾಸ್, ಗೋಸೈನ್‌ಬರ್ ಬಜಾರ್‌ನಲ್ಲಿರುವ ತನ್ನ ಮನೆಯಲ್ಲಿ ವಿಷ ಕುಡಿಯುವ ಮೊದಲು 'ಅಮ್ಮಾ, ನಾನು ಕದ್ದಿಲ್ಲ' ಎಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಊರಿನಲ್ಲಿ ಶಾಂತ ಮತ್ತು ಸಭ್ಯ ವ್ಯಕ್ತಿ ಆಗಿದ್ದ ಕೃಷ್ಣೇಂದು ಭಾನುವಾರ ಮಧ್ಯಾಹ್ನ ತಿಂಡಿ ಖರೀದಿಸಲು ಸ್ಥಳೀಯ ಅಂಗಡಿಗೆ ಹೋಗಿದ್ದರು. ಆ ಸಮಯದಲ್ಲಿ ಅಂಗಡಿಯಲ್ಲಿ ಯಾರೂ ಇಲ್ಲದ ಕಾರಣ, ಹೊರಗಿರುವ ಚಿಪ್ಸ್ ಪ್ಯಾಕೆಟ್ ನೋಡಿ ಎತ್ತಿಕೊಂಡು ಬಂದಿದ್ದಾನೆ ಎಂದು ಅವರ ಕುಟುಂಬದವರು ಹೇಳಿದ್ದಾರೆ.

ಇದನ್ನು ನೋಡಿದ್ದೇ ತಡ ಮಾಲೀಕ ಸೈಕಲ್‌ನಲ್ಲಿ ಆತನನ್ನು ಬೆನ್ನಟ್ಟಿಸಿಕೊಂಡು ಹೋಗಿದ್ದಾನೆ. ಆಗ ಬಾಲಕ ಮಾಲೀಕನಿಗೆ ಕ್ಷಮೆ ಕೇಳಿ, 15 ರೂ. ಚಿಪ್ಸ್ ಪ್ಯಾಕೆಟ್‌ಗೆ 20 ರೂ. ನೀಡಿದ್ದ. ಬಳಿಕ ಬಾಲಕನನ್ನು ಅಂಗಡಿಗೆ ಎಳೆದುಕೊಂಡ ಹೋದ ಮಾಲೀಕ, ಇನ್ನುಳಿದ ಚಿಲ್ಲರೆ ಹಣವನ್ನು ನೀಡಿದ್ದಾನೆ. ಆದರೂ ಕೂಡ ಬಾಲಕನನ್ನು ಬಿಡದೇ ಸಾರ್ವಜನಿಕರ ಮುಂದೆ ಎಳೆದೊಯ್ದು, ಕಪಾಳಮೋಕ್ಷ ಮಾಡಿ ರಸ್ತೆಯಲ್ಲಿಯೇ ಅವಮಾನಿಸಿದ್ದ. ಜೊತೆಗೆ ಕಿವಿ ಹಿಡಿದು ಕ್ಷಮೆಯಾಚಿಸುವಂತೆ ತಿಳಿಸಿದ್ದ ಎಂದು ಮೂಲಗಳು ತಿಳಿಸಿವೆ.

ಈ ಘಟನೆಯ ಬಗ್ಗೆ ತಿಳಿದ ಕೃಷ್ಣೇಂದುವಿನ ತಾಯಿ ಅವನನ್ನು ಅಂಗಡಿಗೆ ಕರೆದುಕೊಂಡು ಹೋಗಿ ಮತ್ತಷ್ಟು ಗದರಿಸಿದಳು, ಬಹುಶಃ ತನ್ನ ಮಗ ಅನುಭವಿಸುತ್ತಿರುವ ಭಾವನಾತ್ಮಕ ತೊಂದರೆಯ ಅರಿವಿರಲಿಲ್ಲ. ಇದರಿಂದ ಬೇಸತ್ತ ಬಾಲಕ ಆ ಸಂಜೆ ಮನೆಗೆ ಹಿಂತಿರುಗಿ, "ಅಮ್ಮಾ, ನಾನು ಕದ್ದಿಲ್ಲ" ಎಂದು ಬರೆದು ವಿಷ ಸೇವಿಸಿದ್ದಾನೆ. ಕೂಡಲೇ ಅವನನ್ನುಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಚಿಕಿತ್ಸೆ ಫಲಿಸದೆ ಬೆಳಿಗ್ಗೆ ಬಾಲಕ ಮೃತಪಟ್ಟಿದ್ದಾನೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನಂತರ ಕುಟುಂಬಕ್ಕೆ ಬಿಟ್ಟುಕೊಡಲಾಗಿದೆ. ಶುಕ್ರವಾರದವರೆಗೆ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲವಾದರೂ, ಅಸಹಜ ಸಾವಿನ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಔಪಚಾರಿಕ ದೂರು ಸಲ್ಲಿಸಿದಾಗ ಪೂರ್ಣ ತನಿಖೆಯನ್ನು ಪ್ರಾರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net