ಜಾತಿ ಗಣತಿ ವರದಿ ಸಂಪುಟದಲ್ಲಿ ಮಂಡನೆಗೆ ಸಚಿವರಿಬ್ಬರ ಸಹಮತ

Lad and Bairegowda
Published on

ಬೆಂಗಳೂರು: ಜಾತಿ ಗಣತಿ (ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ) ವರದಿ ಬಗ್ಗೆ ಹೊರಗಿಂದ ಹೊರಗೆ, ಅಂದಾಜಿನ ಮೇಲೆ ನಡೆಯುವ ಚರ್ಚೆಗಳು ಅರ್ಥಹೀನವಾಗುತ್ತವೆ ಎಂದು ಸಚಿವರಾದ ಕೃಷ್ಣಬೈರೇಗೌಡ, ಸಂತೋಷ್ ಲಾಡ್ ವಿಶ್ಲೇಷಿಸಿದರು.

ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಪ್ರತ್ಯೇಕವಾಗಿ ಮಾತನಾಡಿದ ಅವರು, ವರದಿಯು ಅಧಿಕೃತ ಅಂಕಿ-ಅಂಶಗಳ ಆಧಾರದಲ್ಲಿ ಸಾರ್ವಜನಿಕ ಚರ್ಚೆಯಾಗಬೇಕು. ಇದಕ್ಕಾಗಿ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಿ ಅಂಗೀಕರಿಸಬೇಕಾಗಿದೆ ಎಂದು ಸಹಮತ ವ್ಯಕ್ತಪಡಿಸಿದರು.

ಜಾತಿ ಗಣತಿ ವರದಿ ಜಾರಿಗೆ ತರಬೇಕು ಎಂಬ ಒತ್ತಡವಿರುವ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಸಭೆಗೆ ತಂದು ಅನುಮೋದನೆ ಪಡೆದು, ಅನುಷ್ಠಾನಕ್ಕೆ ತರುವುದಾಗಿ ಹೇಳಿದ್ದಾರೆ ಎಂದು ಸಚಿವರಿಬ್ಬರು ಸಿಎಂ ಪರವಾಗಿ ಬ್ಯಾಟಿಂಗ್ ಮಾಡಿದರು.

ಅಂಗೀಕರಿಸಲಿ

ಜಾತಿ ಗಣತಿ ವರದಿ ವಿಚಾರದಲ್ಲಿ ಸಿಎಂ ಸಕಾರಾತ್ಮಕ ನಿಲುವು ತಳೆದಿದ್ದಾರೆ. ಸಚಿವರು, ಶಾಸಕರು, ಅನೇಕ ಸಮುದಾಯಗಳ ಒತ್ತಾಸೆಯಂತೆ ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಈ ವರದಿ ಮಂಡಿಸಿ ಅಂಗೀಕರಿಸಬೇಕು ಎಂದು ಸಂತೋಷ ಲಾಡ್ ಹೇಳಿದರು.

ನಂತರ ನನ್ನ ಅಭಿಪ್ರಾಯ

ವರದಿ ಕುರಿತು ಯಾರಿಗೇ ಆಗಲಿ ಅವರದ್ದೇ ಆದ ಅಭಿಪ್ರಾಯವಿರುತ್ತದೆ, ಹೇಳಲು ಅವಕಾಶವಿದೆ. ಈ ಬಗ್ಗೆ ನನ್ನ ಅಭಿಪ್ರಾಯವನ್ನು ಸಚಿವ ಸಂಪುಟ ಸಭೆಯಲ್ಲಿ ಹೇಳುವೆ. ಈಗ ಹೇಳಿದರೆ ಸರ್ಕಾರದ ಅಭಿಪ್ರಾಯವಾಗುತ್ತದೆ ಎಂದು ಕೃಷ್ಣಬೈರೇಗೌಡ ಪ್ರತಿಪಾದಿಸಿದರು.

ಬೇರೆ ಸಚಿವರು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿದರೂ ಸಮಚಿತ್ತದಿಂದ ಸ್ವೀಕರಿಸುತ್ತೇವೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಿದ ನಂತರ ನನ್ನ ಅಭಿಪ್ರಾಯ ಹಂಚಿಕೊಳ್ಳುವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net