ಯೋಗಿಗೆ ಪ್ರಿಯ ಅಪ್ರಿಯಗಳೆರಡೂ ಬಾಧಿಸವು

Samskruti 5 Geeteya belaku
Published on

ಗವದ್ಗೀತೆಯ ಈ ಶ್ಲೋಕದಲ್ಲಿನ (5-19) ಸಾಮ್ಯವೆಂದರೆ ‘ಸಮತ್ವ’. ಮತ್ತೂ ವಿಶಾಲವಾಗಿ ವಿಚಾರ ಮಾಡಿದರೆ, ಎಲ್ಲರಲ್ಲಿಯೂ ಒಬ್ಬನೇ ಬ್ರಹ್ಮನಿರುವುದರಿಂದ ಸಾಮ್ಯವೆಂಬ ಶಬ್ದಕ್ಕೆ ‘ಬ್ರಹ್ಮ’ವೆಂಬ ಅರ್ಥವನ್ನೂ ತರಬಹುದು. ಎಲ್ಲ ಪ್ರಾಣಿಗಳಲ್ಲಿಯೂ ಪರಬ್ರಹ್ಮವಸ್ತುವಿದೆಯೆಂಬ ದೃಷ್ಟಿಯಿಂದ ನೋಡಿದಾಗ ಸಮಭಾವ ಉಂಟಾಗುವುದು, ಅರ್ಥಾತ್ ‘ಸಮತ್ವದೃಷ್ಟಿ’. ಬೇರೆ-ಬೇರೆ ಶರೀರಗಳಲ್ಲಿರುವ ಪರಬ್ರಹ್ಮಕ್ಕೆ ಆಯಾ ಶರೀರಗಳ ಧರ್ಮದ ಅಂಟಿಲ್ಲವೇ ಎಂಬ ಅನುಮಾನ ಬರಬಹುದು. ಅನೇಕ ಪಾತ್ರೆಗಳಲ್ಲಿರುವ ನೀರು ಸೂರ್ಯನ ಕಿರಣವನ್ನು ಸಮಾನವಾಗಿ ಪ್ರತಿಫಲಿಸುವಂತೆ ಪರಬ್ರಹ್ಮಕ್ಕೆ ಯಾವುದೇ ಶರೀರಗಳ ದೋಷ-ನಂಟು ಇರದು. ಪರಬ್ರಹ್ಮವಸ್ತುವಿಗೂ, ಅದು ನೆಲೆಸಿರುವ ವಸ್ತುವಿಗೂ ಯಾವುದೇ ಸಂಬಂಧವಿಲ್ಲದಿರುವುದರಿಂದ ಪರಬ್ರಹ್ಮವು ನಿದೋಷವಾದುದು. ಆದ್ದರಿಂದ ಮೊದಲಿಗೆ ಸಾಮ್ಯದ ಅಭ್ಯಾಸ ಮಾಡಿದವರು ಪರಬ್ರಹ್ಮದಲ್ಲಿ ಮನಸ್ಸನ್ನು ನಿಲ್ಲಿಸುವುದನ್ನು ಅಭ್ಯಾಸ ಮಾಡಿದ್ದಾರೆಂದೇ ಅರ್ಥ. ಚಂಡಾಲ ಮುಂತಾದವರಲ್ಲಿ ದೋಷವಿದ್ದರೂ ಅವರೊಳಗಿರುವ ಆತ್ಮವಸ್ತುವಿಗೆ ಆ ದೋಷ ಅಂಟಿದೆಯೆಂದು ಮೂಢರು ಭಾವಿಸುತ್ತಾರೆಯೇ ಹೊರತು ಜ್ಞಾನಿಗಳಲ್ಲ. ಇದನ್ನು ತಿಳಿದಾಗ ಪರಬ್ರಹ್ಮವು ನಿದೋಷವೆಂಬುದು ಚೆನ್ನಾಗಿ ಮನದಟ್ಟಾಗುವುದು.

ನ ಪ್ರಹೃಷ್ಯೇತ್ ಪ್ರಿಯಂ ಪ್ರಾಪ್ಯ ನೋದ್ವಿಜೇತ್ಪ್ರಾಪ್ಯ ಚಾಪ್ರಿಯಂ |

ಸ್ಥಿರಬುದ್ಧಿರಸಂಮೂಢೋ ಬ್ರಹ್ಮವಿದಹಣಿ ಸ್ಥಿತಃ ||-5-20

‘ಸ್ಥಿರಬುದ್ಧಿಯುಳ್ಳವನೂ (ಸರ್ವಭೂತಗಳಲ್ಲಿಯೂ ಸಮನಾದ ದೋಷರಹಿತನಾದ ಆತ್ಮನೊಬ್ಬನೇ ಇರುವನೆಂದು ಸಂಶಯವಿಲ್ಲದ ಬುದ್ಧಿಯುಳ್ಳವನು), ಮೋಹವಿಲ್ಲದವನೂ, ಬ್ರಹ್ಮದಲ್ಲಿಯೇ ಇರುವವನೂ ಆದ ಬ್ರಹ್ಮಜ್ಞಾನಿಯು ಪ್ರಿಯವಾದುದನ್ನು ಹೊಂದಿ ಹಿಗ್ಗಕೂಡದು, ಅಪ್ರಿಯವಾದುದನ್ನು ಹೊಂದಿ ಕುಗ್ಗಕೂಡದು.’

ಆ ಬುದ್ಧಿಯ ಮೂಲಕ ಆತ್ಮವೆಂದು ಅರಿತಿದ್ದಾಗ ಮನಸ್ಸು ಕೆಲವೊಮ್ಮೆ ಆಚೀಚೆ ಅಲೆದಾಡುವುದು. ನೇರ ಸಾಕ್ಷಾತ್ಕಾರದ ಅನುಭವವಾದಾಗ, ಮನಸ್ಸು ಪರಬ್ರಹ್ಮದಲ್ಲಿ ನಿಂತಾಗ ಬುದ್ಧಿ ಸ್ಥಿರವಾಗುವುದು. ಹೀಗಿದ್ದಾಗ ಮೋಹವುಂಟುಮಾಡುವ ಆಕರ್ಷಣೆಗಳು ಪರಿಸರದಲ್ಲಿದ್ದರೂ ಮನಸ್ಸಿನ ಮೇಲೆ ಪರಿಣಾಮವಾಗದು. ಆನಂದ-ಉದ್ವೇಗಗಳುಂಟಾಗದ ಆತ್ಮಜ್ಞಾನಿಗೆ ಹೀಗೇಕೆ ಹೇಳಿದ್ದಾನೆ ಭಗವಂತ. ಹೀಗೆ ಹೇಳಿದ್ದರೂ ಆತ್ಮಜ್ಞಾನಿ ಈ ರೀತಿ ನಡೆಯುವುದಿಲ್ಲವೆಂದು ತಿಳಿಯುವುದು ಒಂದು ರೀತಿ. ಅಥವಾ ಆತ್ಮಜ್ಞಾನಿಯಲ್ಲದವನು ಆತ್ಮಜ್ಞಾನಿಯ ಅನುಭವವನ್ನು ಅನುಕರಿಸಿದರೆ ತಾನೂ ಆ ಅನುಭವವನ್ನು ಪಡೆಯಬಹುದು. ಇದನ್ನೇ ಸ್ಥಿತಪ್ರಜ್ಞನ ವಿಚಾರದಲ್ಲಿ ಕಂಡಿದ್ದೇವೆ. ಸ್ಥಿತಪ್ರಜ್ಞನ ಸ್ವಾಭಾವಿಕ ಬಾಹ್ಯ-ಲಕ್ಷಣಗಳನ್ನು ಅನುಸರಿಸಿದಾಗ ಕಾಲಕ್ರಮೇಣ ಅವನ ಆಂತರ್ಯದ ಅನುಭವ ಬರುವುದು. ಸ್ವಾಮಿ ವಿವೇಕಾನಂದರ ಸರೋವರದಲ್ಲಿನ ಪ್ರತಿಬಿಂಬದ ಉದಾಹರಣೆಯನ್ನು ಈಗಾಗಲೇ ಅನೇಕ ಬಾರಿ ಸ್ಮರಿಸಿದ್ದೇವೆ. ಮನಸ್ಸು ಶಾಂತ ಸರೋವರದಂತಿದ್ದಾಗ ಅದರ ಹಿಂದಿರುವ ಆತ್ಮವಸ್ತುವಿನ ಅನುಭವ ಪಡೆಯಬಹುದು. ಅಲೆಗಳಿಂದ ಅಲುಗಾಡುವ ಸರೋವರದಂತೆ ಮನಸ್ಸಿದ್ದಾಗ ಅದು ವಿಕ್ಷಿಪ್ತವಾಗಿ ಮನಸ್ಸಿನ ಹಿಂದಿನ ಆತ್ಮವಸ್ತುವಿನ ಅನುಭವವಾಗದು. ಆತ್ಮನ ಬ್ರಹ್ಮಾನುಭವ ಬೇಕಾದಲ್ಲಿ ಆನಂದ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ ಇರಬೇಕು. ಈ ಮನಸ್ಸು ನಿರೋಧಿಸುವುದನ್ನೇ ಯೋಗ (ಯೋಗಃ ಚಿತ್ತವೃತ್ತಿ ನಿರೋಧಃ) ಎನ್ನುವರು ಪತಂಜಲಿಮಹರ್ಷಿಗಳು. ಬ್ರಹ್ಮಜ್ಞಾನಿಯ ಮನಸ್ಸು ಯಾವುದೇ ಸಂದರ್ಭ, ಸನ್ನಿವೇಶಗಳಿಗೆ ವ್ಯತ್ಯಾಸವಾಗದೆ ಒಂದೇ ರೀತಿಯ ಶಾಂತ ಭಾವದಲ್ಲಿರುವುದು.

ಬಾಹ್ಯ ಸ್ಪರ್ಶೆಷ್ವಸಕ್ತಾತ್ಮಾ ವಿಂದತ್ಯಾತ್ಮನಿ ಯತ್ಸುಖಂ |

ಸ ಬ್ರಹ್ಮಯೋಗಯುಕ್ತಾತ್ಮಾ ಸುಖಮಕ್ಷಯ್ಯಮಶ್ನುತೇ ||-5-21

‘ಬಾಹ್ಯ ವಿಷಯವಸ್ತುಗಳನ್ನು ಸಂರ್ಪಸದವನು, ತನ್ನ ಆತ್ಮದೊಳಗೆ ವಿಶೇಷ ಸುಖ ಪಡೆಯುವವನು ತನ್ನ ಮನಸ್ಸನ್ನು ಬ್ರಹ್ಮ ಸಹಯೋಗದಲ್ಲಿ ಮುಳುಗಿಸಿ ಅಕ್ಷಯ ಸುಖವನ್ನು ಪಡೆಯುವನು. ಅರ್ಥಾತ್ ಶಬ್ದಾದಿ ವಿಷಯಗಳಲ್ಲಿ ಆಸಕ್ತಿಯಿಲ್ಲದವನು ಅಂತಃಕರಣದಲ್ಲಿ (ವಿಷಯ ನಿರಪೇಕ್ಷವಾದ) ಮತ್ತು ಬ್ರಹ್ಮಯೋಗದಿಂದ ಕೂಡಿದ ಆತ್ಮವನ್ನುಳ್ಳ (ಬ್ರಹ್ಮದಲ್ಲಿ ಸಮಾಹಿತ ಮನಸ್ಸುಳ್ಳವ) ಆ ಯೋಗಿಯು ಅಕ್ಷಯ ಸುಖ ಪಡೆಯುವನು.’

ಭಗವಂತ ಕೊಟ್ಟ ಶರೀರದಲ್ಲಿನ ಜ್ಞಾನ-ಪಂಚೇಂದ್ರಿಯಗಳ ಮೂಲಕ ಹೊರಗಿನ ವಿಷಯವಸ್ತುಗಳ ಸಂಪರ್ಕದಿಂದ ಸುಖದುಃಖಗಳ ಅನುಭವ ಪಡೆಯುತ್ತೇವೆ. ಸಾಮಾನ್ಯ ಮನುಷ್ಯ ಇದೇ ದಿಕ್ಕಿನಲ್ಲಿಯೇ ಹೋಗುತ್ತಿರುತ್ತಾನೆ. ಹೊರಗಿನ ಸುಖ ಕ್ಷಣಿಕ, ಕಾಲಕ್ರಮೇಣ ದುಃಖ-ಸಂಕಟಗಳು ಬರುತ್ತವೆ ಎಂಬುದನ್ನು ಅನುಭವ ಹಾಗೂ ವಿಚಾರದಿಂದ ತಿಳಿದುಕೊಂಡಾಗ ಮನುಷ್ಯ ತನ್ನ ಮನಸ್ಸನ್ನು ಹೊರಗೆ ಬಿಡನು. ಶ್ರೀ ರಾಮಕೃಷ್ಣ ಪರಮಹಂಸರು ಮನುಷ್ಯನ ಮೂರು ರೀತಿಯ ಆನಂದಗಳನ್ನು ಹೇಳಿದ್ದಾರೆ. 1. ವಿಷಯಾನಂದ: ನೂರಕ್ಕೆ ತೊಂಬತ್ತೊಂಬತ್ತು ಜನ ಇದನ್ನೇ ಬಯಸಿ ಕೆಲಸ ಮಾಡುವರು. ಹೊರಗಿನ ವಿಷಯವಸ್ತುಗಳೊಡನೆ ಇಂದ್ರಿಯಸಂಪರ್ಕದಿಂದ ಸುಖ ಇದಕ್ಕೆ ‘ಆದಿ’ ಇದೆ. ‘ಅಂತ’ ಇಲ್ಲವೆಂದರೆ ಒಮ್ಮೆ ವಸ್ತು-ವಿಷಯಸುಖ ಅನುಭವಿಸಿದ ನಂತರ ಮತ್ತೆ-ಮತ್ತೆ ಅದೇ ಬೇಕೆನ್ನುವ ಪ್ರವೃತ್ತಿ ಮನಸ್ಸಿನಲ್ಲಿ ಬೆಳೆಯುವುದು. ಸಾಕೆಂದು ತಾತ್ಕಾಲಿಕವಾಗಿ ಎನಿಸಿದರೂ ಮತ್ತೆ ಮನಸ್ಸು ಆ ದಿಕ್ಕಿಗೇ ಎಳೆಯುವುದು. ಆಧ್ಯಾತ್ಮಿಕ ಸಾಧಕರು ಇದರಿಂದ ಹೊರಗೆ ಬರಲೇಬೇಕು.

2. ಭಜನಾನಂದ: ಭಗವಂತನ ನಾಮದಲ್ಲಿ ರುಚಿ ಬಂದು, ಅವನ ಗುಣಗಾನ ಮಾಡಿದಾಗ ಮನಸ್ಸಿಗೆ ಶಾಂತಿ, ಆನಂದ ಬರುವುದು. ಆಶ್ರಮದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ಚಿತ್ರಪಟ ನೋಡುತ್ತ, ಮನಸ್ಸು ಶುದ್ಧ ಮಾಡಿಕೊಂಡು ಭಜನೆಗಳನ್ನು ಹಾಡುತ್ತೇವೆ. ಹಾಡುವಷ್ಟು ಸಮಯ ಮನಸ್ಸು ಭಜನೆ-ಸಂಗೀತಗಳ ಆನಂದದಲ್ಲಿ ಮುಳುಗಿರುತ್ತದೆ. ಕಾಲಕ್ರಮೇಣ ಮನಸ್ಸು ಶುದ್ಧವಾಗುವುದು. 3.ಬ್ರಹ್ಮಾನಂದ: ಕಾಲಕ್ರಮೇಣ ಸಾಧನೆಯಿಂದ ಪರಬ್ರಹ್ಮವು ಆತ್ಮವಸ್ತುವಿನ ಸಾಕ್ಷಾತ್ಕಾರವಾದಾಗ ಇದು ದೊರೆಯುವುದು.

ಈ ಸ್ಥಿತಿಯಲ್ಲಿರುವವನು ತನ್ನ ಮನಸ್ಸನ್ನು ಹೊರಗಿನ ವಿಷಯ-ವಸ್ತುಗಳ ಸಂಪರ್ಕಕ್ಕೆ ಹೋಗದಂತೆ ತಡೆಯುವ ಪರಮ ವೈರಾಗ್ಯವನ್ನು ಸಂಪಾದಿಸಿರುತ್ತಾನೆ. ಹೀಗಾದಾಗ, ಮನಸ್ಸು ಅವನಲ್ಲಿಯೇ ನೆಲೆನಿಂತಾಗ ಅವನಲ್ಲಿಯೇ ಮನಸ್ಸು ಅಕ್ಷಯ ಸುಖ ಅನುಭವಿಸುವುದು. ಅವನು ಶಾಂತಾನಂದದಲ್ಲಿರುವನು. ಇದರಿಂದ ಅವನ ಮನಸ್ಸು ಬ್ರಹ್ಮದಲ್ಲಿಯೇ ಮುಳುಗಿ, ಬ್ರಹ್ಮದಲ್ಲಿಯೇ ಏಕಾಗ್ರತೆ ಹೊಂದಿ, ಪರಬ್ರಹ್ಮದಲ್ಲಿ ಐಕ್ಯವಾದಾಗ ಪರಮೋಚ್ಚ ಅಕ್ಷಯಸುಖವನ್ನು ಪಡೆಯುವನು. ಆತ್ಮಜ್ಞಾನದ ಸುಖ ಕಾಲಕ್ರಮೇಣ ವೃದ್ಧಿಸುತ್ತಿರುವುದು. ಅನೇಕ ಜನ್ಮಗಳಿಂದ ದೇಹೇಂದ್ರಿಯ ಮನಸ್ಸುಗಳಿಂದ ಬಾಹ್ಯ ಸುಖಭಾವಗಳನ್ನು ಪಡೆದಿರುವ ಪ್ರಬಲ ಸಂಸ್ಕಾರದ ಮನಸ್ಸನ್ನು ಇದ್ದಕ್ಕಿದ್ದಂತೆ ಬ್ರಹ್ಮದಲ್ಲಿ ನೆಲೆ ನಿಲ್ಲಿಸಲು ಬ್ರಹ್ಮವನ್ನು ಕಂಡಿರುವರು ಯಾರು? ಬ್ರಹ್ಮವೇ ತಿಳಿಯದವನು ಬ್ರಹ್ಮದಲ್ಲಿ ಮನಸ್ಸು ನಿಲ್ಲಿಸಿದರೆ ಅಕ್ಷಯ ಸುಖದ ಖಾತ್ರಿ, ಖಚಿತತೆ ಏನು? ಇದಕ್ಕೆ ಆಧಾರವೇನು? ಮೊದಲು ಬಾಹ್ಯಸುಖ ಕಳೆದುಕೊಂಡು, ಆಂತರಿಕ ಸುಖ ಸಿಗದ ಅವಸ್ಥೆ ಬಂದರೆ ಗತಿಯೇನು? ಬ್ರಹ್ಮಾನಂದದ ಪರಮಾನಂದ ಇನ್ನೂ ಅನುಭವಕ್ಕೆ ಬಂದಿಲ್ಲ, ಶಾಸ್ತ್ರದಲ್ಲಿ ಇರಬಹುದು. ಅನುಭವಕ್ಕೆ ಬರದಿರುವುದರಿಂದ ಪ್ರಯೋಜನವೇನು? ಇದನ್ನು ಪ್ರಯತ್ನ, ಸಾಧನೆಗಳಿಂದ ಸಂಪಾದಿಸಿಕೊಳ್ಳಬೇಕು. ಋಷಿ-ಮಹಾತ್ಮರು ಹೇಳಿರುವುದರ ನಂಬಿಕೆ ಹಾಗೂ ನಮ್ಮ ಆಂತರಿಕ ವಿಶ್ವಾಸದಿಂದ ಸಾಧನೆ, ಅಭ್ಯಾಸ ಮಾಡಿ ಪಡೆಯಬಹುದು. ಪರಬ್ರಹ್ಮವಸ್ತು ಅಂತರ್ಯಾಮಿಯಾಗಿರುವುದು ನಮ್ಮೊಳಗಡೆಯೇ ಹೊರತು ಹೊರಗಲ್ಲ. ಮನಸ್ಸನ್ನು ಒಳಗೆ ತಿರುಗಿಸಿದಾಗ ಸತ್ತ ್ವಚ್ಛಿನ್ನ ಝುರಿ ಸಿಗುವುದು, ಅಕ್ಷಯವಾದ ಸುಖವಿರುವುದು. ಆದ್ದರಿಂದ ಈ ಅಕ್ಷಯಸುಖ ಪಡೆಯಲು ಕ್ಷಣಿಕವಾದ ಬಾಹ್ಯಸುಖ ಬಿಡಬೇಕು. ನರಕಕ್ಕೆ ಕೊಂಡೊಯ್ಯುವ ಕೆಳಮಟ್ಟದ ಸುಖ ತ್ಯಜಿಸಬೇಕು. ಇದಕ್ಕಾಗಿ ಇಂದ್ರಿಯಗಳನ್ನು ಒಳಗೆಳೆದು ಬ್ರಹ್ಮದಲ್ಲಿ ನಿಲ್ಲಿಸಬೇಕು.

ಯೇ ಹಿ ಸಂಸ್ಪರ್ಶಜಾ ಭೋಗಾ ದುಃಖಯೋನಯ ಏವ ತೇ |

ಆದ್ಯಂತವಂತಃ ಕೌಂತೇಯ ನ ತೇಷು ರಮತೇ ಬುಧಃ || 5-22

‘ಎಲೈ ಅರ್ಜುನ, ವಿಷಯ, ಇಂದ್ರಿಯಗಳ ಸಂಯೋಗದಿಂದ ಉಂಟಾಗುವ ಕ್ಷಣಿಕ ಸುಖಭೋಗಗಳು ದುಃಖಕ್ಕೆ ಕಾರಣಗಳಾಗಿರುವುವು ಮತ್ತು ಉತ್ಪತ್ತಿ-ನಾಶವುಳ್ಳವುಗಳು (ಆದಿ-ಅಂತ್ಯ). ಜ್ಞಾನಿಗಳು ಅವುಗಳಲ್ಲಿ ರಮಿಸುವುದಿಲ್ಲ.’ ಗೃಹಸ್ಥಾಶ್ರಮದ ಪ್ರಾರಂಭದಲ್ಲಿ ಆನಂದವೆನಿಸಿದರೂ ನಂತರ ಅದರಲ್ಲಿನ ಅಪಾರ ತೊಂದರೆಗಳ ಪರಂಪರೆ ತಿಳಿಯುವುದು. ಮದುವೆ, ಮಕ್ಕಳು, ಬೆಳೆಸುವುದು, ಕಾಯಿಲೆ, ಕಸಾಲೆ ಇತ್ಯಾದಿ ಸಂಸಾರ ಇರುವುದೇ ಹೀಗೆ. ಅಜ್ಜಿಯೊಬ್ಬಳು ಮೊಮ್ಮಗನನ್ನು ನೋಡಬೇಕೆಂದಳು. ನಂತರ ಅವನ ಮುಂಜಿ, ನಂತರ ಮದುವೆ, ನಂತರ ಮೊಮ್ಮಗನಿಗೆ ಮಗುವಾಗಬೇಕು - ಇದಕ್ಕೆ ಕೊನೆಮೊದಲಿಲ್ಲ ಎನ್ನುವರು ಶ್ರೀ ರಾಮಕೃಷ್ಣರು. ಭಾಗವತದಲ್ಲಿ ನಾರದ ಮಹರ್ಷಿಗಳು ಮಹಾವಿಷ್ಣುವಿನಲ್ಲಿ ‘ಮಾಯಾ’ಶಕ್ತಿ ತೋರಿಸಲು ಪ್ರಾರ್ಥಿಸಿದರು. ಭಗವಂತ ತನಗೆ ಬಾಯಾರಿಕೆಯಾಗಿದೆ, ಮೊದಲು ನೀರು ತರಲು ಹೇಳಿದ. ಇವರು ನೀರಿಗಾಗಿ ನದಿಯ ಬಳಿ ಬಂದರೆ ಅಲ್ಲೊಬ್ಬಳು ಸುಂದರಿಯಿದ್ದಾಳೆ. ಅವಳನ್ನು ನೋಡಿ ಮದುವೆಯಾಗಿ, ಸಂಸಾರವಾಗಿ, ಮಕ್ಕಳಾಗಿ, ಒಮ್ಮೆ ದೊಡ್ಡ ಪ್ರವಾಹದಲ್ಲಿ ಸಿಲುಕುವನು. ಮಕ್ಕಳೆಲ್ಲ ಮುಳುಗಿ ಸಾಯುವಾಗ ಗೋಳಾಡಲು ಆರಂಭಿಸಿದ. ಆಗ ಪರಮಾತ್ಮ ನಾರದನನ್ನು ಕರೆದನು. ನಾರದರ ಮನಸ್ಸಿನಲ್ಲಿ ಸಂಸಾರದ ಅನುಭವಗಳೇ ತುಂಬಿತ್ತು. ಪರಮಾತ್ಮ ‘ನೀರೆಲ್ಲಿ?’ ಎಂದನು. ಆಗ ಅವರಿಗೆ ನೀರಿನ ನೆನಪಾಗುವುದು. ಕ್ಷಣಕಾಲದಲ್ಲಿ ನೂರಾರು ವರ್ಷಗಳ ಅನುಭವವಾಗಿತ್ತು.

ಇದೇ ಮಾಯೆ. ಜಗತ್ತಿನಲ್ಲಿ ಇದನ್ನೇ ಕಾಣುತ್ತೇವೆ. ಸುಖವೆಂದು ಭಾವಿಸಿದರೂ ಪರಿಣಾಮ ದುಃಖ ಪರಂಪರೆ. ಜ್ಞಾನಿಯಾದವನು ಇಂತಹದ್ದರಲ್ಲಿ ಮುಳುಗದೆ ದೂರ ಇರುವನು. ಒಂದೆಡೆ ತನ್ನ ಅನುಭವದಿಂದ ತಿಳಿದು, ಲೋಕಸುಖದಿಂದ ದೂರವಿರುವನು. ಇದಕ್ಕೆ ಶಾಸ್ತ್ರ ಹಾಗೂ ಗುರುವಾಕ್ಯಗಳೆರಡೂ ಬಹಳ ಸಹಾಯಕ. ಶಾಸ್ತ್ರದಲ್ಲಿರುವುದನ್ನು (ಸತ್ಯವನ್ನು) ತಿಳಿದು, ಜೀವನದಲ್ಲಿ ಆಚರಣೆಗೆ ತಂದಿರುವ ಋಷಿಮುನಿಗಳೂ ಲೋಕಸುಖದ ಬಗ್ಗೆ ಎಚ್ಚರಿಕೆ ಕೊಡುವರು. ಪರಮಾತ್ಮ ತತ್ತ್ವವನ್ನು ಅನುಭವಕ್ಕೆ ತಂದುಕೊಂಡಿರುವವನೇ ಜ್ಞಾನಿ. ಮೂಢರು ಪಶುಗಳಂತೆ ವಿಷಯಸುಖಗಳಲ್ಲಿಯೇ ಮುಳುಗಿರುವರು. ಆದರೆ ಜ್ಞಾನಿ ಇದರಿಂದ ಸದಾ ದೂರವಿರುವನು. ಹಿಂದಿನ ಜನ್ಮಗಳಲ್ಲಿ ಮಾಡಿದ ಕೆಟ್ಟ ಕರ್ಮಗಳ ಸಂಸ್ಕಾರ ಮತ್ತೆ-ಮತ್ತೆ ಅವುಗಳೆಡೆಗೇ ಎಳೆದು ಕಲಿತಿರುವುದನ್ನು ಅಳಿಸುವುದು. ಸಂಸ್ಕಾರಗಳನ್ನು ನಿಭಾಯಿಸಲು ಸಾಧನೆ ಬಲವಾಗಿರುವುದರ ಜೊತೆಗೆ ಗುರುಕೃಪೆ ಇರಬೇಕು. ಭಕ್ತಿಮಾರ್ಗದಂತೆ ಗುರುವಿನಲ್ಲಿ ಶರಣಾಗಿ ಅವರ ಕೃಪೆ ಬೇಡಬೇಕು. ಗುರುಗಳು ಮನಸ್ಸು ಮಾಡಿದಲ್ಲಿ ಹಳೆಯದೆಲ್ಲ ಹೋಗಿ ಸಾಧನೆಯ ದಾರಿ ಪ್ರಶಸ್ತವಾಗುವುದು.

(ನಿರೂಪಣೆ: ರಾಮಾಯಣ ಸುರೇಶಕುಮಾರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net