

ಮುಂಬೈ: ಇರಾನ್-ಇಸ್ರೇಲ್ ಕದನ ವಿರಾಮ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ಚಿನ್ನದ ಬೆಲೆ 900 ರೂ. ಇಳಿಕೆಯಾಗಿದೆ. ಸೋಮವಾರ 10 ಗ್ರಾಂಗೆ 99,800 ರೂ. ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಮಂಗಳವಾರ 98,900 ರೂ.ಗೆ ಇಳಿದಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನ 800 ರೂ.ನಷ್ಟು ಇಳಿಕೆಯಾಗಿ 98,300 ರೂ.ಗೆ ತಲುಪಿದೆ. ಇದು ಸೋಮವಾರ 99,100 ರೂ. ಇತ್ತು. ಬೆಳ್ಳಿ ದರ ಕೂಡ ಸೋಮವಾರ ಕೆಜಿಗೆ 1,05,200 ರೂ. ಇದ್ದದ್ದು ಮಂಗಳವಾರ 1,000 ರೂ. ಇಳಿಕೆಯಾಗಿ 1,04,200 ರೂ.ಗೆ ತಲುಪಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.
ದಿನದ ಆರಂಭದಲ್ಲಿ ತೀವ್ರ ಏರಿಕೆ ಕಂಡಿದ್ದ ಭಾರತೀಯ ಷೇರುಪೇಟೆ, ನಂತರ ಇರಾನ್-ಇಸ್ರೇಲ್ ಕದನವಿರಾಮ ಘೊಷಣೆ ಹಿನ್ನೆಲೆಯಲ್ಲಿ ಹೂಡಿಕೆದಾರರು ಲಾಭಗಳಿಕೆಗಾಗಿ ಷೇರು ಮಾರಾಟಕ್ಕಿಳಿದ ಪರಿಣಾಮ ಗಣನೀಯ ಪ್ರಮಾಣದಲ್ಲಿ ಕೆಳಗಿಳಿಯಿತು. ಬೆಳಗಿನ ವಹಿವಾಟಿನಲ್ಲಿ, ಮಧ್ಯಪ್ರಾಚ್ಯ ಸಂಘರ್ಷ ಕೊನೆಗೊಳ್ಳುವ ಭರವಸೆಯಿಂದ ಮಾರುಕಟ್ಟೆಗಳು ತೀವ್ರ ಏರಿಕೆ ಕಂಡಿತು. ಒಂದು ಹಂತದಲ್ಲಿ ಸೆನ್ಸೆಕ್ಸ್ 1,121 ಅಂಕ ಏರಿಕೆಯೊಂದಿಗೆ 83,018ಕ್ಕೆ ತಲುಪಿತ್ತು. ಯುದ್ಧವಿರಾಮ ಘೊಷಣೆ ವಿಫಲವಾಗುತ್ತಿದೆ ಎಂಬ ವರದಿಗಳು ಬಂದ ನಂತರ ಕುಸಿಯತೊಡಗಿತು.
ದಿನದ ವಹಿವಾಟಿನ ಕೊನೆಯಲ್ಲಿ 158 ಅಂಕ ಮಾತ್ರ ಏರಿಕೆ ದಾಖಲಿಸಿ 82,055ಕ್ಕೆ ಸ್ಥಿರವಾಯಿತು. ನಿಫ್ಟಿ 72 ಅಂಕ ಏರಿಕೆ ದಾಖಲಿಸಿ 25,044ಕ್ಕೆ ಸ್ಥಿರಗೊಂಡಿತು. ದಿನದ ವಹಿವಾಟಿನ ಮಧ್ಯೆ ಈ ಸೂಚ್ಯಂಕ 25,317ಕ್ಕೆ ತಲುಪಿತ್ತು. ಸೋಮವಾರ ಸೆನ್ಸೆಕ್ಸ್ 511 ಅಂಕ ಕುಸಿದು 81,896ಕ್ಕೆ ಮತ್ತು ನಿಫ್ಟಿ 140 ಅಂಕ ಕಡಿಮೆಯಾಗಿ 24,971ಕ್ಕೆ ಕೊನೆಗೊಂಡಿತ್ತು.