ಅರಸು ನೀಡಿದ್ದ ಭೂಮಿಗೆ ಬೋರ್‌ವೆಲ್ ಸೌಲಭ್ಯ

HUN-NOV-1-3(KALLAHALLI CHALUVAIAH PROGRARMME)
ಹುಣಸೂರು ತಾಲೂಕು ಕಲ್ಲಹಳ್ಳಿಯ ಚಲುವಯ್ಯರ ಜಮೀನಿನಲ್ಲಿ ಕೊಳವೆಬಾವಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ಚಾಲನೆ ನೀಡಿದರು. ನಿಂಗರಾಜ ಮಲ್ಲಾಡಿ, ದೇವೇಂದ್ರ, ಗಜೇಂದ್ರ, ಹೊಸೂರು ಕುಮಾರ್, ಶಿವಣ್ಣ, ಭೋಗಪ್ಪ ಇತರರಿದ್ದಾರೆ.
Published on

ಜಿ.ಡಿ.ಹರೀಶ್‌ಗೌಡ ಕಾರ್ಯಕ್ಕೆ ದಸಂಸ ಮೆಚ್ಚುಗೆ

ಹುಣಸೂರು : ದೇವರಾಜ ಅರಸು ಉಳುವವನೇ ಭೂಮಿ ಒಡೆಯ ಕಾಯ್ದೆಯಡಿ ಚಲುವಯ್ಯನ ದಲಿತ ಕುಟುಂಬಕ್ಕೆ ನೀಡಿದ್ದ ಭೂಮಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ಕೊಳವೆಬಾವಿ ಹಾಕಿಸಿಕೊಡುವ ಮೂಲಕ ನುಡಿದಂತೆ ನಡೆದುಕೊಂಡಿದ್ದಾರೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಸಂತಸ ವ್ಯಕ್ತಪಡಿಸಿದರು.

ಶುಕ್ರವಾರ ತಾಲೂಕಿನ ಕಲ್ಲಹಳ್ಳಿ ಗ್ರಾಮದ ದಲಿತ ಚಲುವಯ್ಯನ ಜಮೀನಿನಲ್ಲಿ ಕೊರೆಯಿಸಲಾಗಿದ್ದ ಕೊಳವೆಬಾವಿಗೆ ಶಾಸಕ ಹರೀಶ್‌ಗೌಡ ಚಾಲನೆ ನೀಡಿದ ವೇಳೆ ಮಾತನಾಡಿದ ನಿಂಗರಾಜ ಮಲ್ಲಾಡಿ, 5 ದಶಕಗಳ ಹಿಂದೆ ದೇವರಾಜ ಅರಸು ಉಳುವವನೇ ಭೂಮಿಯ ಒಡೆಯ ಕಾಯ್ದೆಯಡಿ ತಾಲೂಕಿನ ದಲಿತ ಚಲುವಯ್ಯನಿಗೆ ತಮ್ಮ5.30 ಎಕರೆ ಭೂಮಿಯನ್ನು ನೀಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಿ ಮೊದಲ ಹೆಜ್ಜೆಯಿಟ್ಟರು. ನಂತರ ಅವರು ಜಾರಿಗೊಳಿಸಿದ ಕಾಯ್ದೆ ಇಡೀ ರಾಜ್ಯ ಮತ್ತು ರಾಷ್ಟ್ರಕ್ಕೆ ಮಾದರಿಯಾಯಿತು. ಅಂದು ನೀಡಿದ್ದ ಭೂಮಿಗೆ ಈವರೆಗೆ ನೀರಿನ ಸೌಲಭ್ಯವಿರಲಿಲ್ಲ. ಆಗಿಹೋದ ಎಲ್ಲ ಶಾಸಕರಿಗೂ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಶಾಸಕ ಜಿ.ಡಿ.ಹರೀಶ್‌ಗೌಡರಿಗೆ ಅರಸು ಜಯಂತಿ ವೇಳೆ ಮಾಡಿದ್ದ ಮನವಿಗೆ ಸ್ಪಂದಿಸಿ ಇದೀಗ ಅಂಬೇಡ್ಕರ್ ಅಬಿವೃದ್ಧಿ ನಿಗಮದ ವತಿಯಿಂದ ಗಂಗಾಕಲ್ಯಾಣ ಯೋಜನೆಯಡಿ ಕೊಳವೆಬಾವಿ ಹಾಕಿಸಿಕೊಟ್ಟಿದ್ದಾರೆ. ಆ ಮೂಲಕ ದಲಿತ, ಶೋಷಿತರ ಪರ ದನಿಯಾಗಿ ನಿಂತಿದ್ದಾರೆ ಎಂದು ಕೊಂಡಾಡಿದರು.

ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಡಿ. ದೇವರಾಜ ಅರಸು ತಮ್ಮ ಸ್ವಂತ ಜಮೀನನ್ನು ದಲಿತ ಚಲುವಯ್ಯನಿಗೆ ಬಿಟ್ಟುಕೊಡುವ ಮೂಲಕ ಉಳುವವನೇ ಭೂಮಿಯ ಒಡೆಯ ಎಂಬ ಕಾನೂನನ್ನು ಜಾರಿಗೆ ತಂದು ರಾಜ್ಯದಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆಯನ್ನು ಮಾಡಿದ್ದರು. ಭೂಮಿಯ ಹಕ್ಕನ್ನೇ ಕಾಣದ ಇಂತಹ ದಲಿತ ಕುಟುಂಬಗಳಿಗೆ ಭೂಮಿಯ ಹಕ್ಕನ್ನು ಕೊಟ್ಟು ಸ್ವಾಭಿಮಾನದ ಬದುಕನ್ನು ದಲಿತರು ಕಾಣಲು ಕಾರಣರಾದರು. ಅರಸು ಕೊಟ್ಟ ಜಮೀನಿನಲ್ಲಿ ಶಾಸಕನಾಗಿ ನಾನು ಚಲುವಯ್ಯನ ಕುಟುಂಬಕ್ಕೆ ನೀರಾವರಿ ಕಲ್ಪಿಸಿಕೊಟ್ಟಿರುವುದು ಪುಣ್ಯದ ಕೆಲಸವಾಗಿದೆ ಎಂದರು.

ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಬಸವಲಿಂಗಯ್ಯ ಮಾತನಾಡಿದರು. ಅರಸು ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ಗ್ರಾಮದ ಮುಖಂಡರಾದ ಶಿವಣ್ಣ, ಭೋಗಪ್ಪ, ಚಂದ್ರಪ್ಪ, ಅಯ್ಯಣ್ಣ, ವೆಂಕಟೇಶ, ದಲಿತ ಮುಖಂಡರಾದ ದೇವೇಂದ್ರ ಕುಳವಾಡಿ, ಕಿರಿಜಾಜಿ ಗಜೇಂದ್ರ, ಬಲ್ಲೇನಹಳ್ಳಿ ಕೆಂಪರಾಜು, ಆದಿಜಾಂಭವ ಸಂಘದ ಅಧ್ಯಕ್ಷ ಶಿವಣ್ಣ, ಅಂಬೇಡ್ಕರ್ ಅಭಿವೃದ್ದಿ ನಿಗಮದ ವಿಸ್ತರಣಾಧಿಕಾರಿ ಶಿವರಾಂ, ಚಲುವಯ್ಯನ ಕುಟುಂಬಸ್ಥರು ಅಂದರೆ ಚಲುವಯ್ಯನ ಮಕ್ಕಳಾದ ಕರಿಯಯ್ಯ, ನಾಗೇಂದ್ರ, ಚಂದ್ರಹಾಸ, ಚಲುವರಾಜು, ಮಹೇಶ, ಲಕ್ಷ್ಮೀ, ರಜಿನಿ, ಜಾನಕಮ್ಮ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net