

ಬರೇಲಿ: ವಿವಾದಿತ ಪ್ರದೇಶಗಳನ್ನು ತನ್ನದೆಂದು ಹೇಳಿಕೊಂಡು ನೇಪಾಳ ಸಂಸತ್ನ ಕೆಳಮನೆಯಲ್ಲಿ ಪರಿಷ್ಕೃತ ನಕ್ಷೆಗೆ ಅನುಮೋದನೆ ಪಡೆದುಕೊಂಡ ಬೆನ್ನಲ್ಲೇ ಭಾರತ ಮತ್ತು ನೇಪಾಳದ ಗಡಿಯನ್ನು ಗುರುತಿಸಲು ಹಾಕಲಾಗಿದ್ದ ಸಾಕಷ್ಟು ಸಂಖ್ಯೆಯ ಪಿಲ್ಲರ್ಗಳು ಮಾಯವಾಗಿವೆ ಎಂದು ಸಶಸ್ತ್ರ ಸೀಮಾ ಬಲ್ನ (ಎಸ್ಎಸ್ಬಿ) ಅಧಿಕಾರಿಗಳು ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲಾಧಿಕಾರಿಗೂ ಈ ಬಗ್ಗೆ ಮಾಹಿತಿ ನೀಡಿರುವ ಎಸ್ಎಸ್ಬಿ, ಗಡಿ ಗುರುತಿಸುವಿಕೆಯ ಪಿಲ್ಲರ್ಗಳನ್ನು ತೆಗೆದುಹಾಕಿರುವ ನೇಪಾಳದ ಸಶಸ್ತ್ರ ಪಹರಿ ಬಲ್ (ಎಸ್ಪಿಬಿ) ಆ ಪ್ರದೇಶಗಳಲ್ಲಿ ಹೊಸ ಹೊರಠಾಣೆಗಳನ್ನು ನಿರ್ಮಿಸಿಕೊಂಡಿದೆ ಎಂದು ಹೇಳಿದ್ದಾರೆ.
ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಹಾದು ಹೋಗಿರುವ ಭಾರತ-ನೇಪಾಳದ 62.9 ಗಡಿ ಭಾಗದ ಭದ್ರತೆ ಹೊಣೆಗಾರಿಕೆಯನ್ನು ಎಸ್ಎಸ್ಬಿಯ 39ನೇ ಬೆಟಾಲಿಯನ್ ವಹಿಸಿಕೊಂಡಿದೆ. ಎಸ್ಎಸ್ಬಿಯ ಕಮಾಂಡಂಟ್ ಮುನ್ನಾ ಸಿಂಗ್ ಅವರು ನೇಪಾಳದ ಅತಿಕ್ರಮಣವನ್ನು ವಿವರಿಸಿ ಲಖಿಂಪುರ್ ಖೇರಿಯ ಜಿಲ್ಲಾಧಿಕಾರಿ ಶೈಲೇಂದ್ರ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.
ಎಷ್ಟು ಪಿಲ್ಲರ್ಗಳನ್ನು ಕಿತ್ತುಹಾಕಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ. ಅದು ತುಂಬಾ ಗೌಪ್ಯ ಸಂಗತಿ ಎಂದು ಕಮಾಂಡಂಟ್ ಮುನ್ನಾಸಿಂಗ್ ಸುದ್ದಿಗಾರರಿಗೆ ಹೇಳಿದ್ದಾರೆ.
ಖೇರಿ ಜಿಲ್ಲೆಯು ನೇಪಾಳದ ಕಾಂಚನಪುರ ಜಿಲ್ಲೆ ಮತ್ತು ಕೈಲಾಲಿ ಜಿಲ್ಲೆಗಳೊಂದಿಗೆ ಗಡಿಭಾಗವನ್ನು ಹಂಚಿಕೊಳ್ಳುತ್ತದೆ. ಬಿಹಾರದಲ್ಲಿ ಹಾದು ಹೋಗಿರುವ ಭಾರತ-ನೇಪಾಳೆ ಗಡಿ ಭಾಗದಲ್ಲಿ ಇತ್ತೀಚೆಗೆ ನೇಪಾಳದ ಸಶಸ್ತ್ರ ಪೊಲೀಸರು ನಡೆಸಿದ್ದ ಗುಂಡಿನ ದಾಳಿಯಲ್ಲಿ ಬಿಹಾರದ ಒಬ್ಬ ರೈತ ಮೃತಪಟ್ಟಿದ್ದರು. ಜತೆಗೆ ಇನ್ನಿಬ್ಬರು ಗಾಯಗೊಂಡಿದ್ದರು. ಈ ಘಟನೆಯ ನಂತರದಲ್ಲಿ ನೇಪಾಳದೊಂದಿಗಿನ ಗಡಿ ಭಾಗದಲ್ಲಿ ಭಾರತ ಪಹರೆಯನ್ನು ಹೆಚ್ಚಿಸಿದೆ.