

ನವದೆಹಲಿ: ಪೂರ್ವ ಲಡಾಖ್ನ ಗಲ್ವಾನ್ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷ ನಡೆದ ಬಳಿಕ ಉಭಯ ದೇಶಗಳ ಉನ್ನತ ಹಂತದ ಮಾತುಕತೆಯಲ್ಲಿ ಆಗಿರುವ ಒಪ್ಪಂದ ಪ್ರಕಾರ ಗಡಿ ಪ್ರದೇಶದಲ್ಲಿ ಸೇನೆ ಹಿಂತೆಗೆತಕ್ಕೆ ವಿರೋಧ ವ್ಯಕ್ತ ಪಡಿಸುತ್ತಿರುವ ಚೀನಾ, ಈಗ ಆಯಕಟ್ಟಿನ ಪ್ರದೇಶಗಳಲ್ಲಿ ಬೃಹತ್ ಕಾಮಗಾರಿಗಳನ್ನು ಮತ್ತೆ ಆರಂಭಿಸಿದೆ.
ಗಡಿಗೆ ಸಂಪರ್ಕ ಕಲ್ಪಿಸುವ ರಸ್ತೆ, ಸೇತುವೆ, ಹೆಲಿಪ್ಯಾಡ್ ಹಾಗೂ ಮಿಲಿಟರಿ ಮೂಲ ಸೌಕರ್ಯ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಒಂದು ವೇಳೆ ಮತ್ತೊಮ್ಮೆ ಸೈನಿಕರ ಮುಖಾಮುಖಿ ನಡೆದರೆ ಹೆಚ್ಚಿನ ಸೈನಿಕರು, ಅಗತ್ಯ ಶಸ್ತ್ರಾಸ್ತ್ರಗಳನ್ನು ತ್ವರಿತವಾಗಿ ಪೂರೈಕೆ ಮಾಡಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಈ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎನ್ನಲಾಗಿದೆ.
ಭಾರತದ ವಿರುದ್ಧ ಚೀನಾ ವ್ಯೂಹಾತ್ಮಕ ತಂತ್ರಗಾರಿಕೆ ಅನುಸರಿಸುತ್ತಿದೆ. ರಾಜತಾಂತ್ರಿಕ ಹಾಗೂ ಮಿಲಿಟರಿ ಹಂತದ ಮಾತುಕತೆಯಲ್ಲಿ ಗಡಿಯಲ್ಲಿ ಸೇನೆ ಹಿಂಪಡೆಯಲು ಒಪು್ಪತ್ತದೆ. ಆದರೆ ಸೇನೆಯನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತಿದೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತ ಇದಕ್ಕೆ ಉತ್ತರ ನೀಡಲು ಸಿದ್ಧವಾಗಿದೆ. ಗಡಿ ಸಮೀಪದ ಸೇನಾ ನೆಲೆಗಳಲ್ಲಿ ಟ್ಯಾಂಕ್, ಆರ್ಟಿಲರಿ ಹಾಗೂ ಹೆಚ್ಚು ವರಿ ಯೋಧರ ನಿಯೋಜನೆ ಮಾಡಲಾಗಿದೆ ಎಂದಿದ್ದಾರೆ.
ಮಹತ್ವದ ಸಭೆ: ರಕ್ಷಣಾ ಸಚಿವ ರಾಜನಾಥ ಸಿಂಗ್ ಶನಿವಾರ ಮಹತ್ವದ ಸಭೆ ನಡೆಸಿದ್ದು, ಮೂರೂ ಪಡೆಗಳ ಸಿಬ್ಬಂದಿ ಮುಖ್ಯಸ್ಥ ಜ. ಬಿಪಿನ್ ರಾವತ್, ಭೂ, ವಾಯು, ನೌಕಾಪಡೆಗಳ ಮುಖ್ಯಸ್ಥರು ಭಾಗವಹಿಸಿದ್ದರು.
ಉತ್ಪಾದನಾ ಕ್ಷೇತ್ರ ಕುರಿತು ಪ್ರಧಾನಿ ನೇತೃತ್ವದಲ್ಲಿ ಸಭೆ: ಭಾರತದಲ್ಲಿ ಉತ್ಪಾದನಾ ಕ್ಷೇತ್ರಕ್ಕೆ ಉತ್ತೇಜನ ನೀಡುವುದು ಮತ್ತು ವಿದೇಶಗಳಿಂದ ಆಮದಾಗುತ್ತಿರುವ ಆಟಿಕೆಗಳನ್ನು ನಿಯಂತ್ರಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ, ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಆಟಿಕೆಗಳನ್ನು ತಯಾರಿಸುವ ಹಲವಾರು ಕ್ಲಸ್ಟರ್ಗಳು ದೇಶದಲ್ಲಿವೆ. ಇಂಥ ಆಟಿಕೆಗಳು ನಮ್ಮ ಸಂಸ್ಕೃತಿ ಜತೆ ಸಂಬಂಧ ಹೊಂದಿವೆ. ಮಕ್ಕಳ ಮಾನಸಿಕ ಅಭಿವೃದ್ಧಿಗೂ ಸಹಕಾರಿಯಾಗಿವೆ. ಆತ್ಮನಿರ್ಭರ ಯೋಜನೆ ಅಡಿ ಇವುಗಳ ಉತ್ಪಾದನೆಗೆ ಆದ್ಯತೆ ನೀಡುವಂತೆ ಪ್ರಧಾನಿ ಅಧಿಕಾರಿಗಳಿಗೆ ಸಲಹೆ ನೀಡಿದರು. ಭಾರತಕ್ಕೆ ಚೀನಾದಿಂದ ದೊಡ್ಡ ಪ್ರಮಾಣದಲ್ಲಿ ಆಟಿಕೆ ಆಮದಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವುದು ಸರ್ಕಾರದ ಉದ್ದೇಶವಾಗಿದೆ.
ಚೀನಾ ಪ್ರಸ್ತಾವನೆ ತಿರಸ್ಕರಿಸಿದ ಭಾರತ: ಎರಡೂ ಪಡೆಗಳು ಈಗಿನ ಸ್ಥಿತಿಯಿಂದ ಸಮಾನ ದೂರ ಹಿಂದಕ್ಕೆ ಸರಿಯಬೇಕು ಎಂದು ಚೀನಾ ಮುಂದಿಟ್ಟ ಪ್ರಸ್ತಾವನೆಯನ್ನು ಭಾರತ ತಿರಸ್ಕರಿಸಿದೆ. ಪ್ಯಾಂಗಾಂಗ್ ಸರೋವರದ ಫಿಂಗರ್ ಪಾಯಿಂಟ್ -4ನಲ್ಲಿ ಈಗ ಚೀನಾ ಸೇನೆ ಇದೆ. ಕೆಲ ವರ್ಷಗಳ ಹಿಂದೆ ಭಾರತ ಫಿಂಗರ್ ಪಾಯಿಂಟ್-8ರ ವರೆಗೂ ಗಸ್ತು ನಡೆಸುತ್ತಿತ್ತು. ಆದರೆ ಈಗ ಚೀನಾ ಈ ಭಾಗದಲ್ಲಿ ಕಾಮಗಾರಿಗಳನ್ನು ನಡೆಸುತ್ತಿದೆ. ಭಾರತ ಎಲ್ಎಸಿಯಿಂದ ಇನ್ನೂ ಹಿಂದೆ ಸರಿದರೆ ಚೀನಾದ ಆಕ್ರಮಣಕಾರಿ ನೀತಿ ಇನ್ನಷ್ಟು ಹೆಚ್ಚಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ನಿಗದಿತ ಸ್ಥಳದಲ್ಲೇ ಸೇನೆ ನಿಯೋಜನೆ ಮಾಡಲಿದ್ದು, ಚೀನಾ ಸೇನೆ ಈ ಮೊದಲಿನ ಸ್ಥಳಕ್ಕೆ ಮರಳಬೇಕೆಂದು ಸೇನಾಧಿಕಾರಿಗಳು ಆಗ್ರಹಿಸಿದ್ದಾರೆ.