

ಬೆಂಗಳೂರು: ಓದುವ ಅಭಿರುಚಿ ಬೆಳೆಸುವ ಹಾಗೂ ಸಾಹಿತ್ಯಾಸಕ್ತಿ ಹೆಚ್ಚಿಸುವ ಕೈಂಕರ್ಯಕ್ಕೆ ವಿಧಾನಸಭೆ ಸಚಿವಾಲಯವೂ ಹೆಜ್ಜೆ ಇಟ್ಟಿದೆ. ಅದೂ ವಿಧಾನಸೌಧದ ಆವರಣದಲ್ಲಿ ಈ ಮೇಳ ನಡೆಯಲಿದೆ(Book, literature fair at Vidhansouda premises).
ೆಬ್ರವರಿ 28 ರಿಂದ ಮಾರ್ಚ್ 3ರ ವರೆಗೆ ಈ ಮೇಳ ನಡೆಯಲಿದೆ. ಪುಸ್ತಕ ಮತ್ತು ಸಾಹಿತ್ಯ ಮೇಳವನ್ನು ಸಮ್ಮಿಳನಗೊಳಿಸಿ ನಡೆಸಲಾಗುತ್ತದೆ. ಸಿಎಂ ಸಿದ್ದರಾಮಯ್ಯ ಪುಸ್ತಕ ಮೇಳ ಉದ್ಘಾಟನೆ ಮಾಡಲಿದ್ದಾರೆ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್(U T Khadar) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪುಸ್ತಕಪ್ರಿಯರು, ವಿದ್ಯಾರ್ಥಿಗಳನ್ನು ವಿಧಾನಸೌಧದ ಹತ್ತಿರಗೊಳಿಸಲು ಇದು ಸಹಕಾರಿಯಾಗಲಿದೆ. ಸಾಹಿತ್ಯಕ್ಕೆ ಸಂಬಂಧಿಸಿದ ವಿಚಾರ ಸಂಕಿರಣ ನಡೆಯಲಿವೆ. ಉತ್ತಮ ಪುಸ್ತಕಕ್ಕೆ ಬಹುಮಾನ ಕೂಡ ನೀಡಲಾಗುವುದು ಎಂದರು.
ಶಾಸಕರು ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 3 ಲಕ್ಷ ರೂ.ವರಗೆ ಪುಸ್ತಕ ಖರೀದಿಗೆ ಅವಕಾಶ ಕಲ್ಪಿಸಲಾಗುವುದು. ಈ ನಿಧಿಯಡಿ ಪುಸ್ತಕ ಖರೀದಿಸಿ ಶಾಸಕರು ತಮ್ಮ ಕ್ಷೇತ್ರದ ಶಾಲೆ, ಕಾಲೇಜು, ಗ್ರಂಥಾಲಯಗಳಿಗೆ ನೀಡಬಹುದು. ಆದರೆ, ಇದು ಕಡ್ಡಾಯವಲ್ಲ ಎಂದು ಹೇಳಿದರು.
ಪುಸ್ತಕ ಮೇಳದ ಜೊತೆಗೆ ಆಹಾರ ಮೇಳವನ್ನೂ ಆಯೋಜಿಸಲಾಗುವುದು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಈ ಮೇಳಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಇರಲಿದೆ. ಶಾಲಾ-ಕಾಲೇಜುಗಳ ಮಕ್ಕಳಿಗೆ ಹೆಚ್ಚಿನ ಅವಕಾಶ ನೀಡಲಾಗುವುದು. ಕನ್ನಡ ಪುಸ್ತಕ ಪ್ರಾಧಿಕಾರ, ಖಾಸಗಿ ಮುದ್ರಣದವರು ಸೇರಿ ಯಾವೆಲ್ಲ ಪುಸ್ತಕಗಳು, ಸಂವಾದ, ಗೋಷ್ಠಿಗಳನ್ನು ಮಾಡಬೇಕು ಎಂಬ ಬಗ್ಗೆ ತೀರ್ಮಾನಿಸಲಿದ್ದಾರೆ ಎಂದರು.
ಯಾವ ಸಾಹಿತಿಗಳನ್ನು ಕರೆಸುತ್ತೀರಿ ಎಂಬ ಕುರಿತ ಪ್ರಶ್ನೆಗೆ, ನಮಗೆ ಎಡವೂ ಇಲ್ಲ, ಬಲವೂ ಇಲ್ಲ, ನಮ್ಮದು ಸ್ಟ್ರೇಟ್. ಗೇಟ್‌ನ ಹೊರಗಡೆ ಎಡ ಪಂಥ, ಬಲ ಪಂಥ ಇರಲಿ. ಆದರೆ ಒಳಗೆ ಬಂದ ಬಳಿಕ ನೇರವಾಗಿ ಇರಲಿ ಎಂದು ಪ್ರತಿಕ್ರಿಯಿಸಿದರು.
ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ, ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಉಪಸ್ಥಿತರಿದ್ದರು.
ವಿಧಾನ ಸಭೆ ಸಚಿವಾಲಯದಿಂದ ಫೆಬ್ರವರಿ 28 ರಿಂದ 3ರ ವರೆಗೆ ಆಯೋಜಿಸಲಿರುವ ಪುಸ್ತಕ ಮೇಳಕ್ಕೆ ಸಂಬಂಧಿಸಿದ ಲಾಂಛನವನ್ನು ವಿನ್ಯಾಸಗೊಳಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ. ಆಯ್ಕೆಗೊಳ್ಳುವ ಲಾಂಛನದ ವಿನ್ಯಾಸಕರಿಗೆ ಗೌರವಪೂರ್ವಕವಾಗಿ ಬಹುಮಾನವನ್ನು ನೀಡಲಾಗುವುದು.
ಆಸಕ್ತರು ಪುಸ್ತಕ ಮೇಳಕ್ಕೆ ಸರಿಹೊಂದುವ ಲಾಂಛನವನ್ನು ವಿನ್ಯಾಸಗೊಳಿಸಿ ತಮ್ಮ ಅಂಚೆ ವಿಳಾಸ, ದೂರವಾಣಿ ಸಂಖ್ಯೆ ಮುಂತಾದ ವಿವರಗಳೊಂದಿಗೆ ಫೆಬ್ರವರಿ 3ರ ರೊಳಗಾಗಿ ಕಾರ್ಯದರ್ಶಿಗಳು, ಕರ್ನಾಟಕ ವಿಧಾನಸಭೆ ಸಚಿವಾಲಯ, ಕೊಠಡಿ ಸಂಖ್ಯೆ:121, ಮೊದಲನೇ ಮಹಡಿ, ವಿಧಾನ ಸೌಧ, ಬೆಂಗಳೂರು-560001 ಇವರಿಗೆ ಕಳುಹಿಸಬಹುದು.