

ಅಮೆರಿಕ: ಈಗೆಲ್ಲ ಒಟಿಟಿಯದ್ದೇ ಯುಗ. ಸಿನಿಮಾವನ್ನು ಥಿಯೇಟರ್ನಲ್ಲಿ ನೋಡುವುದಕ್ಕಿಂತ ಮನೆಯಲ್ಲಿ ಕುಳಿತು ಒಟಿಟಿಯಲ್ಲಿ ನೋಡೋದೆ ಒಳಿತು ಎನ್ನುತ್ತೆ ನಮ್ಮ ಸಮಾಜ. ಅದೇ ರೀತಿ ನಿಮಗೂ ನೆಟ್ಫ್ಲಿಕ್ಸ್ಗೂ ಅಳಿಸಲಾಗದ ನಂಟು ಉಂಟಾಗಿದೆಯಾ? ಹಾಗಾದರೆ ನಿಮಗೆ ಇದೆ ಒಂದು ಅದ್ಭುತ ಅವಕಾಶ. ನೆಟ್ಫ್ಲಿಕ್ಸ್ನಲ್ಲಿ ವೆಬ್ ಸೀರಿಸ್ ನೋಡುತ್ತಾ ಪಿಜ್ಜಾ ತಿನ್ನೋದಕ್ಕೆ ಸಂಬಳ ಕೊಡಲು ಈ ಸಂಸ್ಥೆ ಸಿದ್ಧವಾಗಿದೆ.
ಅಮೆರಿಕದ ಬೋನಸ್ಫೈಂಡರ್ ಹೆಸರಿನ ಜಾಲತಾಣ ಅಂತದ್ದೊಂದು ವಿಶೇಷ ಕೆಲಸಗಾರರನ್ನು ಹುಡುಕಲಾರಂಭಿಸಿದೆ. ಪ್ರೊಫೆಷನಲ್ ಬಿಂಜೆ ವಾಚರ್ ಬೇಕು ಎಂದು ಜಾಹೀರಾತು ನೀಡಿದೆ. ಅವರ ಕೆಲಸ ಬೇರೇನಿಲ್ಲ. ಮೂರು ನೆಟ್ಫ್ಲಿಕ್ಸ್ ಸೀರಿಸ್ಗಳನ್ನು ನೋಡಬೇಕು. ಅದರ ಕಥೆ, ಚಿತ್ರಕಥೆ, ನಟನೆಯ ಗುಣಮಟ್ಟ, ಕ್ಲೈಮ್ಯಾಕ್ಸ್ಗಳ ಬಗ್ಗೆ ರಿವ್ಯೂ ನೀಡಬೇಕು. ಅದರ ಜತೆ ಅವರಿಗೆ ಪಿಜ್ಜಾವನ್ನೂ ನೀಡಲಾಗುತ್ತದೆ. ಆ ಪಿಜ್ಜಾದ ಗುಣಮಟ್ಟವನ್ನೂ ಪರಿಶೀಲಿಸಿ ವರದಿ ನೀಡಬೇಕು. ಈ ಕೆಲಸಕ್ಕೆ ಸಂಸ್ಥೆ 500 ಡಾಲರ್ ಅಂದರೆ ಸುಮಾರು 36 ಸಾವಿರ ರೂಪಾಯಿ ನೀಡುವುದಾಗಿ ಹೇಳಿಕೊಂಡಿದೆ.
ಈ ವಿಚಿತ್ರ ಕೆಲಸದ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಬೋನಸ್ ಫೈಂಡರ್ ಅಧಿಕೃತ ವೆಬ್ಸೈಟ್ನಲ್ಲಿ ನೋಡಿ ತಿಳಿದುಕೊಳ್ಳಬಹುದು. ನೀವೂ ಅರ್ಜಿ ಸಲ್ಲಿಸಬಹುದು. ಅದೃಷ್ಟ ನಿಮ್ಮದಾಗಿದ್ದರೆ ಸಂಸ್ಥೆಯ ಕೆಲಸಕ್ಕೆ ನೀವೇ ಆಯ್ಕೆಯಾದರೂ ಆಗಬಹುದು. (ಏಜೆನ್ಸೀಸ್)