

ಹಾವೇರಿ: ಮಾಜಿ ಮುಖ್ಯಮಂತ್ರಿ ಹಾವೇರಿ-ಗದಗ ಲೋಕಸಭೆ ಕ್ಷೇತ್ರದ ನೂತನ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಕೇಂದ್ರ ಸಚಿವ ಸ್ಥಾನ ಕೈತಪ್ಪಿದೆ. ಇದು ಬಿಜೆಪಿ ಕಾರ್ಯಕರ್ತರು, ಬೊಮ್ಮಾಯಿ ಬೆಂಬಲಿಗರಲ್ಲಿ ತುಸು ಬೇಸರ ಮೂಡಿಸಿದೆ.
ನಿಕಟಪೂರ್ವ ಮುಖ್ಯಮಂತ್ರಿ, ಪ್ರಸ್ತುತ ಶಿಗ್ಗಾಂವಿ- ಸವಣೂರ ಶಾಸಕರಾಗಿದ್ದರೂ ಹೈಕಮಾಂಡ್ ಮಾತಿಗೆ ಒಪ್ಪಿ ಲೋಕಸಭೆ ಚುನಾವಣೆ ಎದುರಿಸಿ, ಗೆಲುವು ಸಾಧಿಸಿದ ಬೊಮ್ಮಾಯಿ ಅವರಿಗೆ ಅವರ ತಂದೆಯಂತೆ ಕೇಂದ್ರ ಸಚಿವ ಸ್ಥಾನ ದೊರೆಯುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಅದು ಸುಳ್ಳಾಗಿದೆ.
ಬಿಜೆಪಿ ಸ್ಪಷ್ಟ ಬಹುಮತ ಪಡೆಯದ ಹಿನ್ನೆಲೆಯಲ್ಲಿ ಮಿತ್ರ ಪಕ್ಷಗಳಿಗೆ ಹೆಚ್ಚಿನ ಸಚಿವ ಸ್ಥಾನ ಹಂಚಿಕೆ ಮಾಡಬೇಕಿರುವ ಕಾರಣ ಹಲವರಿಗೆ ಅವಕಾಶ ತಪ್ಪಿದೆ. ಆರಂಭದ ಪಟ್ಟಿಯಲ್ಲಿ ಬೊಮ್ಮಾಯಿ ಹೆಸರು ಇದ್ದರೂ ಕೊನೆಯ ಕ್ಷಣದಲ್ಲಿ ಕೈತಪ್ಪಿದೆ ಎನ್ನಲಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಕ್ಯಾಬಿನೇಟ್ ದರ್ಜೆಯ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎನ್ನುತ್ತವೆ ಬಿಜೆಪಿ ಮೂಲಗಳು.