ಬೊಮ್ಮಾಯಿಗೆ ಕೃಷ್ಣಾ ಪರೀಕ್ಷೆ: ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣಾ ಅರ್ಜಿಗಳ ಪಟ್ಟಿ; 4 ವಿಶೇಷ ಮನವಿ

Bommai
Published on

| ಮೃತ್ಯುಂಜಯ ಕಪಗಲ್ ಬೆಂಗಳೂರು

ಕೃಷ್ಣಾ ಎರಡನೇ ನ್ಯಾಯಾಧಿಕರಣ ಅಂತಿಮ ತೀರ್ಪಿನ ಅಧಿಸೂಚನೆಗೆ ಕೇಂದ್ರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರಿರುವ ಜತೆಗೆ ಪರಿಹಾರ ಕಾನೂನು ಮಾರ್ಗದ ತಲಾಶೆಯಲ್ಲಿದೆ. ಇದೇ ವೇಳೆ ತೀರ್ಪಿಗೆ ಸಂಬಂಧಿಸಿದ ವ್ಯಾಜ್ಯವು ಮಹತ್ವದ ತಿರುವು ಪಡೆಯುವ ನಿರೀಕ್ಷೆಯಿದೆ.

ತೆಲಂಗಾಣ ಸಲ್ಲಿಸಿರುವ ರಿಟ್ ಅರ್ಜಿ, ನಾಲ್ಕು ವಿಶೇಷ ಮನವಿ ಅರ್ಜಿ (ಎಸ್​ಎಲ್​ಪಿ) ಹಾಗೂ ಇತರ ಎಸ್​ಎಲ್​ಪಿಗಳನ್ನು ಸುಪ್ರೀಂ ಕೋರ್ಟ್ ಆ.4ರಂದು ಪಟ್ಟಿ ಮಾಡಲಿದೆ. ಅರ್ಜಿಗಳು ಲಿಸ್ಟ್​ಗೆ ಸೇರ್ಪಡೆಯಾದರೆ ವಿಚಾರಣೆಗೆ ರಹದಾರಿ ಸಿಗಲಿದ್ದು, ಮುಂದಿನ ವಿಚಾರಣೆ ದಿನಾಂಕವನ್ನು ಗೊತ್ತುಪಡಿಸುವ ಸಾಧ್ಯತೆಯಿದೆ ಎಂದು ಕಾನೂನು ತಜ್ಞರು ಹೇಳುತ್ತಾರೆ. ಅಧಿಸೂಚನೆ ಪ್ರಕಟಿಸುವ ವಿಚಾರದಲ್ಲಿ ಜಂಟಿ ಕಾನೂನು ಹೋರಾಟಕ್ಕೆ ಮಹಾರಾಷ್ಟ್ರ ಈಗಾಗಲೆ ಸಹಮತ ವ್ಯಕ್ತಪಡಿಸಿದ್ದು, ಕರ್ನಾಟಕ ಪ್ರಯತ್ನಗಳಿಗೆ ಇನ್ನಷ್ಟು ಬಲ ತುಂಬಿದಂತಾಗಿದೆ. ತೆಲಂಗಾಣದ ತಕರಾರು ಅರ್ಜಿ ವಿಚಾರಣೆ ಬಾಕಿ ಇರಿಸಿ, ಕಾವೇರಿ ಮಾದರಿಯಲ್ಲಿ ಐತೀರ್ಪಿನ ಅಧಿಸೂಚನೆ ಪ್ರಕಟಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಸುಪ್ರೀಂ ಕೋರ್ಟ್​ಗೆ ರಾಜ್ಯ ಸರ್ಕಾರ ಈಗಾಗಲೆ ಮನವಿ ಮಾಡಿದೆ.

ಬೊಮ್ಮಾಯಿಗೆ ಸವಾಲು: ಕೃಷ್ಣಾ ಕಣಿವೆಯು ಉತ್ತರ ಕರ್ನಾಟಕದ ಜನರ ಜೀವವಾಹಿನಿಯಾಗಿದೆ. ಹೀಗಾಗಿ ಇದೇ ಭಾಗದವರಾದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸತ್ವ ಪರೀಕ್ಷೆಯಾಗಲಿದೆ. ಈ ಹಿಂದೆ ಜಲ ಸಂಪನ್ಮೂಲ ಸಚಿವರಾಗಿ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಸಂಪುಟದಲ್ಲಿ ಜಲ ವ್ಯಾಜ್ಯಕ್ಕೆ ಸಂಬಂಧಿಸಿದ ಕೆಲಸಗಳನ್ನು ನಿಭಾಯಿಸಿದ್ದಾರೆ. ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ತೆರವಾದ ಜಲ ಸಂಪನ್ಮೂಲ ಖಾತೆಯನ್ನು ಪರೋಕ್ಷವಾಗಿ ಬೊಮ್ಮಾಯಿ ನಿಭಾಯಿಸಿದ್ದು, ನುರಿತವರು ಎಂಬ ಕಾರಣಕ್ಕೆ ಬಿಎಸ್​ವೈ ಒತ್ತಾಸೆ ನೀಡಿದ್ದರು. ಸುಪ್ರೀಂ ಕೋರ್ಟ್​ನಲ್ಲಿ ವ್ಯಾಜ್ಯದ ವಿಚಾರಣೆ ವೇಳೆ ರಾಜ್ಯದ ನಿಲುವು ಗಟ್ಟಿಯಾಗಿ ಪ್ರತಿಪಾದನೆಗೆ ಅಡೆತಡೆ ಉಂಟಾಗಬಾರದು ಎಂದರಿತು ದೂರದೃಷ್ಟಿಯ ಹೆಜ್ಜೆಯಿಟ್ಟಿದ್ದಾರೆ. ಅಡ್ವೋಕೇಟ್ ಜನರಲ್ ಆಗಿ ಪ್ರಭುಲಿಂಗ ನಾವದಗಿ ಮುಂದುವರಿಸಿದ್ದು, ಕಾನೂನು ಮತ್ತು ತಾಂತ್ರಿಕ ತಜ್ಞರ ತಂಡಗಳ ಜತೆಗೆ ಸಿಎಂ ಆಗುವುದಕ್ಕೆ ಮುನ್ನವೇ ಹಲವು ಸುತ್ತಿನ ಚರ್ಚೆ ನಡೆಸಿ ಸಜ್ಜುಗೊಳಿಸಿದ್ದಾರೆ.

6ರಂದು ವಿಚಾರಣೆ ಸಾಧ್ಯತೆ: ಕಳಸಾ-ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಗೋವಾ ಹೂಡಿರುವ ನ್ಯಾಯಾಂಗ ನಿಂದನೆ ದಾವೆಯು ಆ.6ಕ್ಕೆ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆಗೆ ಬರುವ ಸಾಧ್ಯತೆಗಳಿವೆ. ಈ ವಿಷಯವು ಬೊಮ್ಮಾಯಿಗೆ ಮತ್ತೊಂದು ಸವಾಲಾಗಿದೆ. ಮುಂಬೈ-ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಕಳಸಾ-ಬಂಡೂರಿ ಯೋಜನೆ ಪ್ರಮುಖವಾಗಿದೆ. ಮಹದಾಯಿ ನದಿ ನೀರಿನ ವಿವಾದ ಕುರಿತು ಸುಪ್ರೀಂ ಕೋರ್ಟ್ ನೀಡಿದ ಮಧ್ಯಂತರ ತೀರ್ಪಿನ ಪ್ರಕಾರ, ಕರ್ನಾಟಕಕ್ಕೆ 13.42 ಟಿಎಂಸಿ ಅಡಿ ನೀರು ಹಂಚಿಕೆಯಾಗಿದ್ದು, ಕುಡಿಯುವ ನೀರು ಪೂರೈಕೆಗಾಗಿ ಕಾಮಗಾರಿ ಕೈಗೆತ್ತಿಕೊಳ್ಳಲು ಹಸಿರು ನಿಶಾನೆ ದೊರೆತಿದೆ. ಈ ನಡುವೆ, ಸುಪ್ರೀಂ ಆದೇಶದಂತೆ ಜಂಟಿ ನಿರ್ವಹಣಾ ಸಮಿತಿಯು ಕಾಮಗಾರಿ ಸ್ಥಳ ಪರಿವೀಕ್ಷಿಸಿ ವರದಿ ಸಲ್ಲಿಸಿದೆ. ಅಲ್ಲದೆ, ಕರ್ನಾಟಕ ಮತ್ತು ಗೋವಾದ ತಲಾ ಓರ್ವ ಸದಸ್ಯರು ಪ್ರತ್ಯೇಕ ವರದಿ ಸಲ್ಲಿಸಿದ್ದು, ಗೋವಾ ಸದಸ್ಯ ಸಲ್ಲಿಸಿದ ವರದಿಗೆ ರಾಜ್ಯ ಸರ್ಕಾರ ಆಕ್ಷೇಪಣೆ ಎತ್ತಿದೆ.

ಅಧಿಸೂಚನೆಯ ಅನುಕೂಲಗಳೇನು?: ಕೃಷ್ಣಾ ಎರಡನೇ ನ್ಯಾಯಾಧಿಕರಣದ ಐತೀರ್ಪಿನ ಅಧಿಸೂಚನೆ ಪ್ರಕಟವಾದರೆ, ರಾಜ್ಯಕ್ಕೆ ಬಿ ಸ್ಕೀಮ್ಲ್ಲಿ ಹೆಚ್ಚುವರಿಯಾಗಿ ಹಂಚಿಕೆಯಾದ ನೀರು ಸಂಗ್ರಹ, ಬಳಕೆ ಸಾಧ್ಯವಾಗಲಿದೆ. ಇದಕ್ಕಾಗಿ ರೂಪಿಸಿದ ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳ, ಕೃಷ್ಣಾ ಮೂರನೇ ಹಂತದ 10ಕ್ಕೂ ಯೋಜನೆಗಳ ಅನುಷ್ಠಾನದಿಂದ 11.30 ಲಕ್ಷ ಎಕರೆ ನೀರಾವರಿಗೆ ಒಳಪಡಲಿದೆ. ಉತ್ತರ ಕರ್ನಾಟಕ 12 ಜಿಲ್ಲೆಗಳ ಅಭಿವೃದ್ಧಿಯ ಚಹರೆಯೇ ಬದಲಾಗಲಿದೆ.

ವಿವಾದದ ಮುಖ್ಯಾಂಶಗಳು

  • ನ್ಯಾ. ಬ್ರಿಜೇಶ್​ಕುಮಾರ್ ಮಿಶ್ರಾ ನೇತೃತ್ವದ ಕೃಷ್ಣಾ 2ನೇ ನ್ಯಾಯಾಧಿಕರಣವು 2014ರ ಡಿ.30ರಂದು ಅಂತಿಮ ತೀರ್ಪು ಪ್ರಕಟಿಸಿದೆ.
  • ಆಂಧ್ರಪ್ರದೇಶ ವಿಭಜನೆಗೊಂಡು ಹೊಸದಾಗಿ ತೆಲಂಗಾಣ ರಾಜ್ಯ ಉದಯಿಸಿದ ಬೆನ್ನಲ್ಲೇ ತೆಲಂಗಾಣ ಸರ್ಕಾರ 2015ರಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
  • ಹೊಸದಾಗಿ ನ್ಯಾಯಾಧಿಕರಣ ರಚಿಸಿ ಜಲ ವಿವಾದದ ಮರು ವಿಚಾರಣೆ ನಡೆಸಬೇಕು ಅಥವಾ ನ್ಯಾ. ಮಿಶ್ರಾ ನೇತೃತ್ವದ ಎರಡನೇ ನ್ಯಾಯಾಧಿಕರಣಕ್ಕೆ ಈ ಅರ್ಜಿ ಪರಿಗಣಿಸಬೇಕೆಂದು ನಿರ್ದೇಶಿಸಲು ಕೋರಿದೆ.
  • ಕೃಷ್ಣಾ ಕೊಳ್ಳದ ನೀರು ಹಂಚಿಕೆ ಸಮರ್ಪಕ ಆಗಿಲ್ಲ. ಕಣಿವೆ ವ್ಯಾಪ್ತಿಗೆ ಬರುವ ತಮಗೂ ಮಾನ್ಯತೆ ಬೇಕೆನ್ನುವುದು ತೆಲಂಗಾಣ ವಾದ.
  • ಈಗಾಗಲೆ ಹಂಚಿಕೆ ಮಾಡಿದ ನೀರಿನಲ್ಲೇ ಪರಸ್ಪರ ಹಂಚಿಕೆಯು ಆಂಧ್ರ, ತೆಲಂಗಾಣ ರಾಜ್ಯಗಳ ಆಂತರಿಕ ವಿಚಾರವೆಂದು ಕೃಷ್ಣಾ 2ನೇ ನ್ಯಾಯಾಧಿಕರಣ ತನ್ನ ನಿಲುವನ್ನು ಕೇಂದ್ರ ಸರ್ಕಾರಕ್ಕೆ ಸ್ಪಷ್ಟಪಡಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net