

ಕರೊನಾದಿಂದಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ಬಂದ್ ಮಾಡಲಾಗಿದೆ. ಶಾಲಾ- ಕಾಲೇಜುಗಳನ್ನು ಮುಚ್ಚಲಾಗಿದೆ. ಮತ್ತೆ ಯಾವಾಗ ಶುರುವಾಗುತ್ತೋ ಗೊತ್ತಿಲ್ಲ. ಈ ಕಾರಣದಿಂದಾಗಿ ಕರ್ನಾಟಕದಲ್ಲಿ 1-8ನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆಯಿಲ್ಲದೆ ಪಾಸ್ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ. ಇದೇ ಕ್ರಮವನ್ನು ಸಿಬಿಎಸ್ಸಿ ಹಾಗೂ ಐಸಿಎಸ್ಇ ಸೇರಿ ವಿವಿಧ ರಾಜ್ಯಗಳ ಶಿಕ್ಷಣ ಮಂಡಳಿಗೂ ಅನುಸರಿಸಿವೆ.
ಆದರೆ, ವಿಶ್ವವಿದ್ಯಾಲಯಗಳು ಕೂಡ ಇದೇ ನಿಯಮ ಪಾಲಿಸಲು ಸಾಧ್ಯವೇ? ಪದವಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡಿ ಎಂದರೆ ಹೇಗಾಗಬೇಡ? ಆದರೆ, ಇಂಥದ್ದೊಂದು ಸಲಹೆಯನ್ನು ಪ್ರಾಧ್ಯಾಪಕರೇ ನೀಡುತ್ತಿದ್ದಾರೆ ಎಂಬುದು ಮತತ್ಒಮದು ವಿಶೇಷ.
ಹೌದು... ಬಾಂಬೆ ವಿಶ್ವವಿದ್ಯಾಲಯ ಹಾಗೂ ಕಾಲೇಜು ಪ್ರಾಧ್ಯಾಪಕರ ಸಂಘ ಈ ಸಲಹೆಯನ್ನು ಮುಂಬೈ ವಿಶ್ವವಿದ್ಯಾಲಯಕ್ಕೆ ನೀಡಿದೆ. ಎಲ್ಲ ಪರೀಕ್ಷೆ ಹಾಗೂ ಫಲಿತಾಂಶವನ್ನು ಬಾಕಿಯುಳಿಸಿ ಪದವಿ ಪ್ರಥಮ ವರ್ಷ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳನ್ನು ಮುಂದಿನ ವರ್ಷಕ್ಕೆ ಬಡ್ತಿ ನೀಡುವಂತೆ ಒತ್ತಾಯಿಸಿದೆ.
ಕೊರೊನಾ ಸಂಕಷ್ಟದಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಭಾರಿ ಹಿನ್ನಡೆಯುಂಟಾಗಿದೆ. ಅದರಲ್ಲೂ ದೇಶದಲ್ಲೇ ಅತಿ ಹೆಚ್ಚು ಕರೊನಾ ಸೋಂಕಿತ ಪ್ರಕರಣಗಳು ಮುಂಬೈನಲ್ಲೇ ವರದಿಯಾಗಿವೆ.
ಈಗಾಗಲೇ ಆದಾಯ, ಉದ್ಯೋಗ ಕಳೆದುಕೊಂಡಿರುವ ಕುಟುಂಬಗಳ ಸದಸ್ಯರು ತಮ್ಮೂರುಗಳಿಗೆ ತೆರಳಲು ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾರೆ. ಇದರಿಂದಾಗಿ ವಿಶ್ವವಿದ್ಯಾಲಯದ ಎಷ್ಟು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ ಎಂಬುದರ ಮಾಹಿತಿಯಿಲ್ಲ. ಇಂಥ ಸಂದರ್ಭದಲ್ಲಿ ಪರೀಕ್ಷೆ ನಡೆಸುವ ಯಾವುದೇ ಯತ್ನವು ವಿದ್ಯಾರ್ಥಿಗಳಿಗೆ ಸಂಕಷ್ಟವನ್ನು ತಂದಿಡಲಿದೆ ಎಂದು ಪ್ರಾಧ್ಯಾಪಕರ ಸಂಘವು ಮುಂಬೈ ವಿವಿ ಕುಲಪತಿಗೆ ಬರೆದಿದೆ.
ಪ್ರಸ್ತುತ ಶೈಕ್ಷಣಿಕ ಚಟುವಟಿಕೆಯನ್ನು ಆರಂಭಿಸಲು ಮೊದಲ ಆದ್ಯತೆ ನೀಡಬೇಕಿದೆ. ಮೊದಲ ಹಾಗೂ ಎರಡನೇ ವರ್ಷದ ವಿದ್ಯಾರ್ಥಿಗಳಿಗೆ ಮುಂದಿನ ಅವಧಿಗೆ ಪ್ರವೇಶ ನೀಡಿ. ಇತರ ಸ್ವಾಯತ್ತ ಶಿಕ್ಷಣ ಸಂಸ್ಥೆಗಳಿಗೂ ಇದೇ ನಿಯಮವನ್ನು ಅನ್ವಯಗೊಳಿಸಿ ಎಂದು ಸಂಘ ಸಲಹೆ ನೀಡಿದೆ.
ಈಗಾಗಲೇ ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಅನುಸರಿಸಲಾಗುವ ಈ ವಿಧಾನವನ್ನು ರಾಜ್ಯದ ವಿವಿಗಳು ಕೂಡ ಅನುಸರಿಸಬಹುದೇನೋ?