

ಬೆಂಗಳೂರು: ನಗರದ ಮೂರು ಪ್ರತಿಷ್ಠಿತ ಕಾಲೇಜುಗಳಿಗೆ ಶುಕ್ರವಾರ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಕಳುಹಿಸಿದ್ದ ಹಿನ್ನೆಲೆಯಲ್ಲಿ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ನಗರದ ಬಸವನಗುಡಿ ರಸ್ತೆಯ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು, ಎಂಎಸ್‌ಆರ್ ನಗರದ ಎಂ.ಎಸ್.ರಾಮಯ್ಯ ಇಂಜಿನಿಯರಿಂಗ್ ಕಾಲೇಜು ಹಾಗೂ ವಿವಿಪುರದ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ) ಕಾಲೇಜುಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ.
ಸತ್ತನಾಥಪುರ ವಿ ಶೇಖರ್ ಹೆಸರಿನ ಇ-ಮೇಲ್ ಐಡಿಯಿಂದ ಈ ಮೂರು ಇಂಜಿನಿಯರಿಂಗ್ ಕಾಲೇಜುಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ. ಈ ಕಾಲೇಜುಗಳಿಗೆ ಹೈಡ್ರೋಜನ್‌ಯುಕ್ತ ಸುಧಾರಿತ ಸ್ಫೋಟ ಸಾಧನ(ಐಇಡಿ) ಅಳವಡಿಸಲಾಗಿದೆ. ಅದು ಸ್ಫೋಟಗೊಳಲಿದ್ದು, ಸಂಜೆ ೫ ಗಂಟೆಯೊಳಗೆ ಕಾಲೇಜಿನಿಂದ ಹೊರಗೆ ಹೋಗುವಂತೆ ಸಂದೇಶದಲ್ಲಿ ಬೆದರಿಕೆ ಹಾಕಲಾಗಿದೆ. ಮಧ್ಯಾಹ್ನ ಸುಮಾರು ೧ ಗಂಟೆಗೆ ಈ ಇ-ಮೇಲ್ ಗಮನಿಸಿದ ಮೂರು ಕಾಲೇಜುಗಳ ಆಡಳಿತ ಮಂಡಳಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸಂಪೂರ್ಣ ತಪಾಸಣೆ:
ಮಾಹಿತಿಯ ಬೆನ್ನಲ್ಲೇ ಪೊಲೀಸರು, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ಶ್ವಾನದ ದಳದ ಸಿಬ್ಬಂದಿ ಕಾಲೇಜುಗಳಿಗೆ ದೌಡಾಯಿಸಿ, ಕಾಲೇಜಿನೊಳಗೆ ಇದ್ದವರನ್ನು ಹೊರಗೆ ಕಳುಹಿಸಿದ್ದಾರೆ. ಬಳಿಕ ಕಾಲೇಜುಗಳ ಒಳ ಹಾಗೂ ಹೊರ ಆವರಣವನ್ನು ಸುಮಾರು ಒಂದು ಗಂಟೆ ಕಾಲ ಸಂಪೂರ್ಣ ತಪಾಸಣೆ ನಡೆಸಿದ್ದಾರೆ. ಈ ವೇಳೆ ಯಾವುದೇ ಸ್ಫೋಟಕ ಸಾಮಾಗ್ರಿಗಳು, ಬಾಂಬ್‌ಗಳು, ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಎಂಬುದು ಖಚಿತವಾಗಿದೆ. ಹೀಗಾಗಿ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.
ಮೂರು ಪ್ರತ್ಯೇಕ ಎಫ್‌ಐಆರ್ ದಾಖಲು:
ಈ ಸಂಬಂಧ ಹನುಮಂತನಗರ, ಸದಾಶಿವನಗರ ಹಾಗೂ ವಿವಿಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ. ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಕಿಡಿಗೇಡಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇತ್ತೀಚೆಗಷ್ಟೇ ನರಗದ ಪ್ರತಿಷ್ಠಿತ ಹೋಟೆಲ್‌ಗಳಾದ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹಾಗೂ ವೈಟ್‌ಫೀಲ್ಡ್‌ನ ಓಟೇರಾ ಹೋಟೆಲ್‌ಗೆ ದುಷ್ಕರ್ಮಿಗಳು ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಕಳುಹಿಸಿದ್ದರು.