

ತಮಿಳುನಾಡು: ಇತ್ತೀಚೆಗಷ್ಟೇ ತಮಿಳು ಚಿತ್ರರಂಗದ ಸ್ಟಾರ್ಗಳಾದ ವಿಜಯ್, ತ್ರಿಶಾ, ನಯನತಾರ ಸೇರಿದಂತೆ ಕೆಲವರಿಗೆ ಬಾಂಬ್ ಬೆದರಿಕೆಗಳು ( Bomb Threat ) ಕೇಳಿಬಂದಿತ್ತು. ಈ ವಿಚಾರ ಸೆಲೆಬ್ರಿಟಿಗಳಲ್ಲಿ ಆತಂಕ ಸೃಷ್ಟಿ ಮಾಡಿದ್ದು, ಶಾಲೆ ಮತ್ತು ದೊಡ್ಡ ಸಂಸ್ಥೆಗಳಿಗೂ ಬೆದರಿಕೆ ಕರೆಗಳು ಕೇಳಿಬಂದಿರುವುದಾಗಿ ವರದಿಗಳು ಉಲ್ಲೇಖಿಸಿವೆ. ಈ ಮಧ್ಯೆ, ಖ್ಯಾತ ಹಿರಿಯ ಮ್ಯೂಸಿಕ್ ಕಂಪೋಸರ್ ಇಳಯರಾಜ ಅವರಿಗೂ ಬಾಂಬ್ ಬೆದರಿಕೆ ಹಾಕಲಾಗಿದೆ.
ವರದಿಗಳ ಪ್ರಕಾರ, ಇಳಯರಾಜ ಅವರ ಸ್ಟುಡಿಯೋಗೆ ಬಾಂಬ್ ಬೆದರಿಕೆ ಬಂದಿದ್ದು, ಕಿಡಿಗೇಡಿಗಳು ಇ-ಮೇಲ್ ಮುಖಾಂತರ ಕಳುಹಿಸಿದ್ದಾರೆ ಎನ್ನಲಾಗಿದೆ. ಡಿಜಿಪಿ ಕಚೇರಿ ಮತ್ತು ಇಳಯರಾಜ ಅವರ ಸ್ಟುಡಿಯೋ ಆವರಣದಲ್ಲಿ ಸ್ಫೋಟಕವನ್ನು ಇರಿಸಲಾಗಿದೆ ಎಂದು ಇಮೇಲ್ನಲ್ಲಿ ತಿಳಿಸಲಾಗಿದೆ. ತಕ್ಷಣವೇ ಬಾಂಬ್ ಪತ್ತೆ ಮತ್ತು ನಿಷ್ಕ್ರೀಯ ದಳ ಸ್ಥಳಕ್ಕೆ ಧಾವಿಸಿ, ಸಂಪೂರ್ಣ ಶೋಧ ನಡೆಸಿತು.
ಇದೇ ರೀತಿ ಅ.2ರಂದು, ನಟರಾದ ತ್ರಿಶಾ ಮತ್ತು ಎಸ್ವಿ ಶೇಖರ್ ಸೇರಿದಂತೆ ಸಿನಿಮಾ, ರಾಜಕೀಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆ ಇಮೇಲ್ಗಳನ್ನು ಕಳುಹಿಸಲಾಗಿತ್ತು. ಈ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿರುವ ಖಾಕಿ ತಂಡ, ನಿಷ್ಕ್ರೀಯ ದಳದೊಂದಿಗೆ ಪರಿಶೀಲನೆ ನಡೆಸಿದೆ. ಆದರೆ, ಅನುಮಾನಾಸ್ಪದ ವಸ್ತುಗಳಾಗಲಿ ಅಥವಾ ಬಾಂಬ್ ಆಗಲಿ ಯಾವುದೂ ಪತ್ತೆಯಾಗಿಲ್ಲ. ಅದಾದ ಬಳಿಕ ಅ.9ರಂದು, ನಟ ವಿಜಯ್ ಅವರ ನಿವಾಸದ ಮೇಲೆ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಕೇಳಿಬಂದ ಬೆನ್ನಲ್ಲೇ ಎಚ್ಚೆತ್ತುಕೊಂಡ ಖಾಕಿ, ಇದೊಂದು ಹುಸಿ ಕರೆ ಎಂಬುದನ್ನು ತಿಳಿದು, ಶಬಿಕ್ (37) ಎಂಬಾತನನ್ನು ಬಂಧಿಸಿದರು,(ಏಜೆನ್ಸೀಸ್).