

ಹಾವೇರಿ: ಹಾನಗಲ್ ಪಟ್ಟಣದ ಶ್ರೀ ಕುಮಾರೇಶ್ವರ ಮಠದಲ್ಲಿ ಬಾಂಬ್ ಇಡಲಾಗಿದೆ ಎಂದು 112 ಸಹಾಯವಾಣಿಗೆ ಅಪರಿಚಿತರ ಕರೆ ಬಂದ ಹಿನ್ನೆಲೆಯಲ್ಲಿ, ಇಂದು (ಸೆ.12) ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಹಾಗೂ ಪೊಲೀಸರು ತಪಾಸಣೆ ನಡೆಸಿದ್ದಾರೆ.
ಕರೆ ಮಾಡಿದ ವ್ಯಕ್ತಿ ಹಾನಗಲ್ ಕುಮಾರೇಶ್ವರ ಮಠದಲ್ಲಿ ಬಾಂಬ್ ಇಡಲಾಗಿದೆ, ಅದು ಸದ್ಯದಲ್ಲೇ ಸ್ಫೋಟವಾಗುತ್ತೆ ಎಂದು ಹೇಳಲಾಗಿದೆ. ಈ ಬಗ್ಗೆ ಎಚ್ಚೆತ್ತುಕೊಂಡ ಪೊಲೀಸರು ಅನಾಮಧೇಯ ಕರೆ ಬಂದ ಕೂಡಲೇ ಎಎಸ್ಸಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ. ಬಳಿಕ ಇದು ಹುಸಿ ಬಾಂಬ್ ಕರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
(ಏಜೆನ್ಸೀಸ್)
ಈ ಬೆದರಿಕೆ ಕರೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ. ಮಠದ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಎರಡು ಗುಂಪಿನ ನಡುವೆ ವಾಗ್ವಾದ ನಡೆಯುತ್ತಿದೆ. ಹಾಗಾಗಿ ಈ ಕಾರಣದಿಂದಲೇ ಕಿಡಿಗೇಡಿಗಳು ಕರೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನಿಸಿದ್ದಾರೆ.