Bomb Threat: ಬೆಂಗಳೂರಿನ ಮೂರು ಕಾಲೇಜುಗಳಿಗೆ ಬಾಂಬ್ ಬೆದರಿಕೆ! ಪೊಲೀಸರಿಂದ ತಾಪಸಣೆ

police
Published on

ಬೆಂಗಳೂರು: ಬೆಂಗಳೂರಿನ ಕೆಲವು ಕಾಲೇಜುಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದೆ ಎಂದು ವರದಿಯಾಗಿದೆ. ಸದ್ಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ನಗರದ ಖಾಸಗಿ ಕಾಲೇಜುಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಇದರಿಂದ ಬೆಚ್ಚಿಬಿದ್ದ ಕಾಲೇಜು ಆಡಳಿತ ಮಂಡಳಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ  ಸದಾಶಿವನಗರ ಠಾಣಾ ವ್ಯಾಪ್ತಿಯಲ್ಲಿರೋ ಎಮ್.ಎಸ್ ರಾಮಯ್ಯ ಕಾಲೇಜು, ಹನುಮಂತ ನಗರ ಠಾಣಾ ವ್ಯಾಪ್ತಿಯಲ್ಲಿರೋ ಬಿಎಮ್‍ಎಸ್ ಕಾಲೇಜು ಹಾಗೂ ಬುಲ್ ಟೆಂಪಲ್ ರಸ್ತೆಯಲ್ಲಿರುವ ಖಾಸಗಿ ಕಾಲೇಜುಗಳಿಗೆ ಈ ಬಾಂಬ್‌ ಬೆದರಿಗೆ ಸಂದೇಶ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಈ ಸಂಬಂಧ ಹನುಮಂತನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇಮೇಲ್ ನೋಡಿದ ಕೂಡಲೇ ಕಾಲೇಜು ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಹನುಮಂತನಗರ ಪೊಲೀಸರು ದೌಡಾಯಿಸಿದ್ದು, ಕಾಲೇಜು ಆವರಣದಲ್ಲಿ ಸದ್ಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಕಾಲೇಜುಗಳಲ್ಲಿ ಸ್ಥಳೀಯ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಮತ್ತು ಶ್ವಾನ ದಳದಿಂದ ಪರಿಶೀಲನೆ ನಡೆಯುತ್ತಿದೆ. ಕಸದ ಡಬ್ಬಿ, ಲಿಫ್ಟ್, ಮೆಟ್ಟಿಲು, ಬ್ಯಾಗ್‍ಗಳನ್ನು ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ.

ಇನ್ನು ಇದೇ ಸೆ.28 ರಂದು ಬೆಂಗಳೂರಿನ ಪ್ರತಿಷ್ಠಿತ ತಾಜ್ ವೆಸ್ಟ್ ಎಂಡ್ ​ಹೋಟೆಲ್​ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಹೋಟೆಲ್ ಒಟೆರಾ ಗೆ ಇ-ಮೇಲ್ ಮೂಲಕ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಹಾಕಿದ್ದರು. ಇದಾದ ಆರು ದಿನಗಳ ಬಳಿಕ ಬೆಂಗಳೂರಿನ ಕೆಲವು ಕಾಲೇಜುಗಳಿಗೆ ಇ-ಮೇಲ್ ಮುಖಾಂತರ ಬಾಂಬ್​ ಬೆದರಿಕೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net