ಬಾಲಿವುಡ್ ಬಾದ್​ ಶಾ ಶಾರುಖ್​ ಖಾನ್​ಗೆ ಶಾಕ್; ಸಮನ್ಸ್​ ಜಾರಿ ಮಾಡಿದ ದೆಹಲಿ ಹೈಕೋರ್ಟ್​ |Shah Rukh Khan

ವಿಜಯವಾಣಿ (8)
Published on

Shah Rukh Khan: ಬಾಲಿವುಡ್ ಬಾದ್ ಶಾ ಶಾರುಖ್​ ಖಾನ್​ಗೆ ದೆಹಲಿ ಹೈಕೋರ್ಟ್​ ಶಾಕ್ ನೀಡಿದ್ದು, ಮಾಜಿ ಎನ್​ಸಿಬಿ ಮುಖ್ಯಸ್ಥ ಸಮೀರ್ ವಾಂಖೆಡೆ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಅರ್ಜಿ ಸಂಬಂಧಿಸಿದಂತೆ ಬುಧವಾರ(ಅ. 08) ಶಾರುಖ್ ಮತ್ತು ಅವರ ರೆಡ್ ಚಿಲ್ಲೀಸ್ ಕಂಪನಿಗೆ ಸಮನ್ಸ್ ಜಾರಿ ಮಾಡಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುವ ಶಾರುಕ್ ಪುತ್ರ ಆರ್ಯನ್ ಖಾನ್ ನಿರ್ದೇಶಿಸಿರುವ 'ದಿ ಬಿ**ಡ್ಸ್ ಆಫ್ ಬಾಲಿವುಡ್' ವೆಬ್ ಸರಣಿಯಲ್ಲಿ ತನ್ನ ವರ್ಚಸ್ಸಿಗೆ ಧಕ್ಕೆ ತಂದಿದೆ ಎಂದು ಸಮೀರ್ ವಾಂಖೆಡೆ ಮಾನನಷ್ಟ ಮೊಕದ್ದಮೆ ಅರ್ಜಿ ದಾಖಲಿಸಿದ್ದಾರೆ. ಅರ್ಜಿಯಲ್ಲಿ ನಟ ಶಾರುಖ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಹಾಗೂ ನೆಟ್‌ಫ್ಲಿಕ್ಸ್ ಸೇರಿ ಇತರರ ಹೆಸರನ್ನು ಉಲ್ಲೇಖಿಸಿದ್ದಾರೆ.

ವರ್ಚಸ್ಸಿಗೆ ಧಕ್ಕೆ ತಂದದ್ದಕ್ಕೆ ಸಮೀರ್  2 ಕೋಟಿ ರೂ. ಪರಿಹಾರವನ್ನು ಕೋರಿದ್ದಾರೆ. ಅದನ್ನು ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಗೆ ದೇಣಿಗೆ ನೀಡುವುದಾಗಿ ಹೇಳಿದ್ದಾರೆ.

ಅರ್ಜಿಗೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್​, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಇತರ ಪ್ರತಿವಾದಿಗಳು ಏಳು ದಿನಗಳಲ್ಲಿ ತಮ್ಮ ಉತ್ತರಗಳನ್ನು ಸಲ್ಲಿಸುವಂತೆ ಆದೇಶಿಸಿದೆ. ಅರ್ಜಿಯ ಪ್ರತಿಗಳನ್ನು ಪ್ರತಿವಾದಿಗಳಿಗೆ ಒದಗಿಸುವಂತೆ ವಾಂಖೆಡೆಗೆ ಆದೇಶಿಸಿ, ಪ್ರಕರಣವನ್ನು ಅಕ್ಟೋಬರ್ 30 ಕ್ಕೆ ಮುಂದೂಡಿದೆ.

ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (NCB) ಮುಂಬೈ ವಲಯ ನಿರ್ದೇಶರಾಗಿದ್ದ IRS ಅಧಿಕಾರಿ ಸಮೀರ್ ವಾಂಖೆಡೆ ಅವರು ಡ್ರಗ್ಸ್​ ಮಾರಾಟ, ಸೇವನೆ ಆರೋಪದಲ್ಲಿ  2021ರಲ್ಲಿ ಆರ್ಯನ್ ಖಾನ್ ಅವರನ್ನು ಬಂಧಿಸಿದ್ದರು. ಬಳಿಕ ಸಾಕ್ಷ್ಯದಾರ ವಿಲ್ಲದ ಕಾರಣ ಆರ್ಯನ್ ಖಾನ್ ಅವರನ್ನು ಕೋರ್ಟ್ ಪ್ರಕರಣದಿಂದ ಕೈಬಿಟ್ಟಿತ್ತು.

ಸದ್ಯ ಕಳೆದ ಸೆಪ್ಟಂಬರ್ 18ರಂದು ಬಿಡುಗಡೆ ಆಗಿರುವ 'ದಿ ಬಿ**ಡ್ಸ್ ಆಫ್ ಬಾಲಿವುಡ್' ವೆಬ್ ಸರಣಿಯಲ್ಲಿ ಸಮೀರ್ ವಾಂಖೆಡೆಯನ್ನು ಹೋಲುವ ರೀತಿಯಲ್ಲಿ ಒಂದು ಪಾತ್ರ ಸೃಷ್ಟಿಸಿದ್ದು, ಅದರಲ್ಲಿ ಮಾದಕ ವಸ್ತುಗಳ ವಿರುದ್ಧ ಕ್ರಮಕೈಗೊಳ್ಳುವ ಅಧಿಕಾರಿಯಂತೆ ತೋರಿಸಲಾಗಿದೆ. ಇದರಲ್ಲಿ ಟ್ರೋಲ್ ಸಮೀರ್ ಅವರನ್ನು ಟ್ರೋಲ್ ಮಾಡುವ ರೀತಿಯಲ್ಲಿ ಚಿತ್ರಿಸಲಾಗಿದೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net