ಅಮಿತಾಭ್​​ ಬಚ್ಚನ್​ಗಾಗಿ ಸಿಂಧೂರ ಧರಿಸುತ್ತಾರಾ ರೇಖಾ? ಕಾರಣ ಏನಿರಬಹುದು? Amitabh Bachchan

amithab
Published on

Amitabh Bachchan | ಭಾರತದ ಮೇರು ನಟ ಅಮಿತಾಭ್​ ಬಚ್ಚನ್​ ಹಾಗೂ ಬಾಲಿವುಡ್‌ನ ಹಿರಿಯ ನಟಿ ರೇಖಾ ಮೇಲಿನ ಪ್ರೀತಿ ವಿಚಾರ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ಹಿಂದೊಮ್ಮೆ ಅಮಿತಾಭ್​ ಪತ್ನಿ ಜಯಾ ಬಚ್ಚನ್​ ಅವರು ನಟಿ ರೇಖಾಳನ್ನ ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದ್ದರು. ಈ ವೇಳೆ ರೇಖಾ ಮುಂದೆಯೇ ನನ್ನ ಪತಿ ಬೇರೆ ಯಾರ ಜೊತೆಗೂ ಸಂಬಂಧ ಹೊಂದಲು ಯಾವುದೇ ಕಾರಣಕ್ಕೂ ನಾನು ಬಿಡುವುದಿಲ್ಲ ಎಂದು ಆಕೆ ಹೇಳಿದ್ದು, ರೇಖಾ ಅವರ ಜೀವನದಲ್ಲಿ ಮಹತ್ವದ ತಿರುವು ಪಡೆದುಕೊಂಡಿತು. ರೇಖಾಗೆ ಬಚ್ಚನ್ ಅವರ ಮೇಲೆ ಆಗಲೂ ಒಲವಿತ್ತು. ಆದರೆ, ಜಯಾ ಹೇಳಿಕೆಯಿಂದ ಅನಿವಾರ್ಯವಾಗಿ ತಮ್ಮ ಪ್ರೀತಿಯನ್ನು ಮರೆತು ಮದುವೆಯಾಗಲು ನಿರ್ಧರಿಸಬೇಕಾಯಿತು. ಇನ್ನು ಇಂದಿಗೂ ರೇಖಾ ಸಿಂಧೂರ ಧರಿಸುತ್ತಿರೋದು ಸಹ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ ಹಿರಿಯ ಲೇಖಕ ಹಾಗೂ ಚಲನಚಿತ್ರ ಇತಿಹಾಸಕಾರರಾದ ಹನೀಫ್ ಜವೇರಿ ಅವರು ಮಾತನಾಡಿದ್ದು, ಚಿತ್ರೀಕರಣದ ಸಮಯದಲ್ಲಿ ರೇಖಾ ಮತ್ತು ಅಮಿತಾಭ್ ಬಚ್ಚನ್ ಅವರ ಬಾಂಧವ್ಯ ಗಟ್ಟಿಯಾಯ್ತು. ಸಿನಿಮಾಗಳನ್ನು ಮಾಡುತ್ತಲೇ ಅವರಿಬ್ಬರು ತುಂಬಾ ಹತ್ತಿರವಾದರು. ಆದರೆ, ಅವರಿಬ್ಬರು ಹೇಗೆ ಪ್ರೀತಿಯಲ್ಲಿ ಬಿದ್ದರೋ ನನಗೆ ತಿಳಿದಿಲ್ಲ. ಆದರೆ, ಅವರಿಬ್ಬರು ಪ್ರೀತಿಸುತ್ತಿದ್ದರು ಅನ್ನೋದು ಶೇ. 100 ರಷ್ಟು ಖಚಿತ ಎಂದು ಜವೇರಿ ಹೇಳಿಕೊಂಡಿದ್ದಾರೆ.

Amithab

ಒಮ್ಮೆ ಅಮಿತಾಭ್ ಮನೆಯಲ್ಲಿ ಇಲ್ಲದಿದ್ದಾಗ ಜಯಾ ಬಚ್ಚನ್, ರೇಖಾ ಅವರನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದರು. ಅವರು ಊಟ ಮಾಡಿದ ನಂತರ ಬಹಳಷ್ಟು ಹರಟೆ ಹೊಡೆದರು. ಈ ವೇಳೆ ಜಯಾ ಅವರು ರೇಖಾಳನ್ನು ನೋಡಿ, ಅಮಿತಾಭ್ ನನ್ನವನು ಮತ್ತು ಯಾವಾಗಲೂ ನನ್ನವನೇ ಆಗಿರುತ್ತಾನೆ ಎಂದು ಹೇಳಿದರು. ಈ ಒಂದು ಹೇಳಿಕೆ ರೇಖಾರ ಮೇಲೆ ತೀವ್ರ ಪ್ರಭಾವ ಬೀರಿತು. ಇದರಿಂದಾಗಿ ಅವರು ಹಿಂದೆ ಸರಿಯಬೇಕಾಯಿತು ಎಂದು ಜವೇರಿ ಬಹಿರಂಗಪಡಿಸಿದ್ದಾರೆ.

ಆದಾಗ್ಯೂ ರೇಖಾ ಅವರು ಜಯಾ ಹೇಳಿಕೆಯ ನೋವಿನಿಂದ ಹೊರಬಂದ ಬಳಿಕ ಕೈಗಾರಿಕೋದ್ಯಮಿ ಮುಖೇಶ್ ಅಗರ್ವಾಲ್ ಅವರನ್ನು ಮದುವೆಯಾದರು. ದೈಹಿಕವಾಗಿ ಮದುವೆಯಾದರೂ ಕೂಡ ಮಾನಸಿಕವಾಗಿ ಅವರಿನ್ನೂ ಬಚ್ಚನ್ ಅವರನ್ನು ಪ್ರೀತಿಸುತ್ತಲೇ ಇದ್ದರು. ಆದರೆ, ಇದರ ನಡುವೆ ಒಂದು ಅನಿರೀಕ್ಷಿತ ಘಟನೆ ನಡೆಯಿತು. ಅದೇನೆಂದರೆ, ಮದುವೆಯಾದ ಒಂದೇ ವರ್ಷದಲ್ಲಿ ರೇಖಾ ಅವರ ಪತಿ ಆತ್ಮಹತ್ಯೆ ಮಾಡಿಕೊಂಡರು. ಈ ಸಂಗತಿ ಆ ಸಮಯದಲ್ಲಿ ಭಾರಿ ಚರ್ಚೆಯಾಗಿತ್ತು. ಏನೇ ಇರಲಿ ಇದೆಲ್ಲ ನಡೆದು ಹೋದ ಘಟನೆ. ಆದರೆ, ರೇಖಾ ಮಾತ್ರ ಅಮಿತಾಭ್ ಬಚ್ಚನ್ ಅವರನ್ನು ಮದುವೆಯಾಗುವುದಿಲ್ಲ ಎಂದು ನಿರ್ಧರಿಸಿದ್ದಾರೆ. ಅಮಿತಾಭ್ ಬಚ್ಚನ್ ಕೂಡ ಅದೇ ನಿರ್ಧಾರವನ್ನು ಮಾಡಿದರು. ಆದರೂ, ನನಗೆ ತಿಳಿದಮಟ್ಟಿಗೆ ಅವರಿಬ್ಬರ ಮಧ್ಯೆ ಪ್ರೀತಿ ಇದೆ ಅನಿಸುತ್ತದೆ ಎಂದು ಜಾವೇರಿ ಹೇಳಿದ್ದಾರೆ.

ಸಿಂಧೂರ ರಹಸ್ಯವೇನು?

ಇದೇ ವೇಳೆ ರೇಖಾ ಅವರ ಸಿಂಧೂರ ಬಗ್ಗೆ ಕೇಳಿದಾಗ ಮಾತನಾಡಿದ ಜಾವೇರಿ, ಆಕೆಯ ಮನಸ್ಸಿನಲ್ಲಿ ಏನಿದೆ ಎಂಬುದು ಅವಳಿಗೆ ಮಾತ್ರ ಚೆನ್ನಾಗಿ ತಿಳಿದಿದೆ. ಆದರೆ, ಈ ಬಗ್ಗೆ ನೋಡಿದವರು ಮನಸ್ಸಿಗೆ ಬಂದಂತೆ ಮಾತಾನಾಡಿಕೊಳ್ಳುತ್ತಾರೆ. ಆದರೆ ಈ ವಿಷಯವನ್ನು ಆಕೆ ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ ಎಂದು ನಾನು ಭಾವಿಸುತ್ತೇನೆ. ಅಮಿತಾಭ್​ ಬಚ್ಚನ್​ ಮೇಲೆ ಅವಳಿಗೆ ಎಲ್ಲೋ ಒಂದು ಕಡೆ ಪ್ರೀತಿ ಇದೆ. ಬಚ್ಚನ್​ಗೆ ಏನೂ ತೊಂದರೆಯಾಗಬಾರದು ಎಂದು ಆಕೆ ಭಾವಿಸುತ್ತಾಳೆ. ಅಮಿತಾಭ್ ಬಚ್ಚನ್​ ಕೂಡ ಆಕೆಗೆ ಏನೂ ಆಗಬಾರದು ಅಂತ ಯೋಚಿಸುತ್ತಾರೆ. ಆ ಸಿಂಧೂರ ಇಬ್ಬರ ನಡುವಿನ ಬಾಂಧವ್ಯವನ್ನು ಸಾರುತ್ತದೆ ಎಂದು ಹನೀಫ್ ಹೇಳಿದ್ದಾರೆ. ಜಯಾ ಬಚ್ಚನ್ ಅವರ ಸ್ವಭಾವ ಮತ್ತು ಕೋಪದಿಂದಾಗಿ ಇವರು ದೂರದಲ್ಲೇ ಉಳಿದಿದ್ದಾರೆ ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಇವರಿಬ್ಬರ ಬಾಂಧವ್ಯ ಮಾತ್ರ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ ಎಂದು ಜವೇರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net