ಸಮಗ್ರ ನೋಟ 2020| ಸಿಹಿಗಿಂತ ಕಹಿ ಪಾಲೇ ಹೆಚ್ಚು...

Bollywood
Published on

ಬಾಲಿವುಡ್ ಚಿತ್ರರಂಗಕ್ಕೆ 2020 ನಿಜಕ್ಕೂ ಘೋರವಾದ ವರ್ಷ. ಕರೊನಾ ಹೊಡೆತ ಒಂದೆಡೆಯಾದರೆ, ಸುಶಾಂತ್ ಸಿಂಗ್ ಸಾವಿನ ಪ್ರಹಸನ ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು. ನೆಪೋಟಿಸಂ (ಸ್ವಜನಪಕ್ಷಪಾತ) ವಿಚಾರವಾಗಿ ಸಿನಿಮಾ ಕುಟುಂಬದ ಕುಡಿಗಳಿಗೆ ಬಹಿಷ್ಕಾರದ ಬಿಸಿ ತಟ್ಟಿತು. ಘಟಾನುಘಟಿ ನಟರು ಕಣ್ಮರೆಯಾದರು. ಬಿಗ್​ಬಿ ಸೇರಿ ಹಲವು ಸ್ಟಾರ್ ಕಲಾವಿದರು ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸೇರಿದರು. ಇನ್ನು ಕೆಲವರು ಆ ಸೋಂಕಿಗೆ ಬಲಿಯಾದರು. ಇವೆಲ್ಲದರ ಜತೆಗೆ ಡ್ರಗ್ ಘಾಟು ಇಡೀ ಬಾಲಿವುಡ್ ಅನ್ನೇ ಪಸರಿಸಿತು. ಅಷ್ಟೇ ಅಲ್ಲ, ನಟಿ ಕಂಗನಾ ರಣಾವತ್ ಇಡೀ ಬಾಲಿವುಡ್ ಅನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಆರೋಪ ಪ್ರತ್ಯಾರೋಪಗಳ ಸುರಿಮಳೆಯನ್ನೇ ಸುರಿಸಿದರು. ಮಹಾರಾಷ್ಟ್ರದ ಸಿಎಂಗೂ ಬಿಡದ ಅವರು, ಸಾಕಷ್ಟು ಟೀಕೆಗೆ ಗುರಿಯಾದರು. ರಾಜ್ಯಸಭೆಯಲ್ಲಿಯೂ ಬಾಲಿವುಡ್ ವಿವಾದ ಬಗ್ಗೆ ಚರ್ಚೆಆಯ್ತು. ಕರೊನಾ ಹಾವಳಿಯ ನಡುವೆಯೂ ಒಳ್ಳೇ ವಿಚಾರಕ್ಕೆ ಸುದ್ದಿ ಮತ್ತು ಸದ್ದು ಮಾಡಿದವರು ನಟ ಸೋನು ಸೂದ್. ಇಡೀ ದೇಶ ಕರೊನಾ ಕೂಪದಲ್ಲಿ ಸಿಲುಕಿದಾಗ, ರಸ್ತೆಗಿಳಿದು ಜನಪರ ಸೇವೆಗಳ ಮೂಲಕವೇ ಜನರ ಬಾಯಲ್ಲಿ ನಲಿದರು. ಬರೀ ಇದೇ ಆಯ್ತಲ್ಲ.. ಎನ್ನುವಷ್ಟರಲ್ಲಿ ಓಟಿಟಿ ವೇದಿಕೆ ಸೌಂಡ್ ಮಾಡಿತು. ಹೊಸ ಹೊಸ ಸಿನಿಮಾಗಳು ಓಟಿಟಿಯಲ್ಲಿ ತೆರೆಕಂಡವು. ಈ ರೀತಿಯಲ್ಲಿ ಬಾಲಿವುಡ್ 2020ರಲ್ಲಿ ಸಿಹಿಗಿಂತ ಕಹಿ ನೆನಪುಗಳ ಮೂಲಕವೇ ವರ್ಷವನ್ನು ಮುಗಿಸಿಕೊಂಡಿತು. ಅದರ ಕಿರು ವರದಿ ಇಲ್ಲಿದೆ.

ಸಾವು ತಂದ ನೋವೇ ಹೆಚ್ಚು..

2020ರಲ್ಲಿ ಬಾಲಿವುಡ್​ಗೆ ಅತಿ ಹೆಚ್ಚು ಆಘಾತ ನೀಡಿದ್ದು ಸಿನಿಮಾ ಮಂದಿಯ ಅನಿರೀಕ್ಷಿತ ಸಾವು. ಸುಶಾಂತ್ ಸಿಂಗ್ ಆತ್ಮಹತ್ಯೆ, ಇರ್ಫಾನ್ ಖಾನ್, ರಿಷಿ ಕಪೂರ್ ಸಾವು ಇಂಡಸ್ಟ್ರಿಗೆ ಶಾಕ್ ನೀಡಿತು. ಸರೋಜ್ ಖಾನ್, ಜಗದೀಪ್, ಸೌಮಿತ್ರ ಚಟರ್ಜಿ, ವಾಜಿದ್ ಖಾನ್, ಆಸಿಫ್ ಬಸ್ರಾ, ನಿಶಿಕಾಂತ್ ಕಾಮತ್ ಹೀಗೆ ಖ್ಯಾತನಾಮ ಕಲಾವಿದರು ಕರೊನಾ ನಡುವೆ ಕಣ್ಮರೆಯಾದರು. ಹಿರಿಯ ನಟ ದಿಲೀಪ್ ಕುಮಾರ್ ಅವರ ಇಬ್ಬರು ಸಹೋದರರೂ ಕೋವಿಡ್​ಗೆ ಬಲಿಯಾದರು.

ವರ್ಷಪೂರ್ತಿ ಸುದ್ದಿಯಾದ ಕಂಗನಾ..

ಬಾಲಿವುಡ್​ನಲ್ಲಿ ಜೂ. 7ರಂದು ಸುಶಾಂತ್ ಸಿಂಗ್ ಆತ್ಮಹತ್ಯೆ ಆಯಿತೋ, ಆ ಕ್ಷಣದಿಂದಲೇ ನಟಿ ಕಂಗನಾ ರಣಾವತ್ ಇಡೀ ಬಾಲಿವುಡ್ ಮೇಲೆ ಟೀಕೆಯ ಸುರಿಮಳೆ ಸುರಿಸಿದರು. ನೆಪೋಟಿಸಂ ವಿಚಾರವಾಗಿ ಆರಂಭವಾಗಿ ಬಳಿಕ ಎ ಲಿಸ್ಟ್ ನಟ, ನಟಿಯರನ್ನು ನಿರ್ದೇಶಕ ನಿರ್ವಪಕರನ್ನು ಟಾರ್ಗೆಟ್ ಮಾಡಿದರು. ಸಲ್ಮಾನ್ ಖಾನ್, ಶಾರುಖ್ ಖಾನ್​ರಿಂದ ಹಿಡಿದು ಕರಣ್ ಜೋಹರ್ ಸೇರಿ ಸ್ಟಾರ್ ಕುಟುಂಬದ ಕುಡಿಗಳಿಗೆ ಟ್ವಿಟರ್​ನಲ್ಲಿ ಟಾಂಗ್ ನೀಡಿದರು. ಸುಶಾಂತ್ ಸಾವಿನ ತನಿಖೆ ಸಿಬಿಐಗೆ ಹಸ್ತಾಂತರವಾದ ಬಳಿಕ ಕಂಗನಾ ಅವರಿಂದ ಡ್ರಗ್ಸ್ ವಿಚಾರ ಬಗೆದಷ್ಟೂ ಆಳಕ್ಕಿಳಿಯಿತು. ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್ ಸಹ ವಿಚಾರಣೆ ಎದುರಿಸಿದರು. ಇತ್ತ ಮಹಾ ಸರ್ಕಾರದ ಮೇಲೂ ಆರೋಪಗಳ ಸುರಿಮಳೆ ಸುರಿಸಿದರು. ಮುಂಬೈ ಪಾಕ್ ಆಕ್ರಮಿತ ಕಾಶ್ಮೀರವಾಗಿದೆ ಎಂಬ ಹೇಳಿಕೆಯಿಂದ ಅತಿಕ್ರಮ ಆರೋಪದಡಿ ಕಂಗನಾ ಅವರ ಕಚೇರಿಯ ಒಂದು ಭಾಗವನ್ನೇ ಒಡೆಯಲಾಯಿತು. ಎಲ್ಲವೂ ತಣ್ಣಗಾಯಿತು ಎನ್ನುವಷ್ಟರಲ್ಲಿ ಕಂಗನಾ- ಹೃತಿಕ್ ಹಳೇ ವಿಚಾರ ಮತ್ತೆ ಕಾವು ಪಡೆದುಕೊಂಡಿತು.

ಓಟಿಟಿಗೊಂದು ಕಾಲ..

ಕರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಸ್ಥಗಿತಗೊಂಡಿದ್ದರಿಂದ ಓವರ್ ದಿ ಟಾಪ್ (ಓಟಿಟಿ) ವೇದಿಕೆಗೆ ಚಿನ್ನದ ಬೆಲೆ ಬಂತು. ಕೋಟಿ ಕೋಟಿ ಮೊತ್ತಕ್ಕೆ ಮಾರಾಟವಾದ ಸಾಕಷ್ಟು ಬಾಲಿವುಡ್ ಸಿನಿಮಾಗಳು ತೆರೆಕಂಡವು. ಜೂ. 12ರಂದು ಅಮಿತಾಭ್ ಬಚ್ಚನ್ ನಟನೆಯ ‘ಗುಲಾಬೋ ಸಿತಾಬೊ’ದಿಂದ ಆರಂಭವಾಗಿ, ಬಳಿಕ ಘೋಮ್ೇತು, ಸೀರಿಯಲ್ ಕಿಲ್ಲರ್, ದಿಲ್ ಬೇಚಾರಾ, ಖುದಾ ಹಫೀಝå್, ಗುಂಜನ್ ಸಕ್ಸೆನಾ, ಲಕ್ಷ್ಮೀ, ಶಕುಂತಲಾ ದೇವಿ, ಲುಡೋ ಹೀಗೆ ಸಾಲು ಸಾಲು ಸಿನಿಮಾಗಳು ತೆರೆಕಂಡವು. ಈ ನಡುವೆ ವೆಬ್​ಸಿರೀಸ್​ಗಳೂ ಪಾರಮ್ಯ ಮೆರೆದವು. ಆರಂಭದ ಮೂರು ತಿಂಗಳಲ್ಲಿ ತೆರೆಕಂಡ 36 ಸಿನಿಮಾಗಳಲ್ಲಿ ಅಜಯ್ ದೇವಗನ್ ನಟನೆಯ ತಾನಾಜಿ ಒಂದೇ ದೊಡ್ಡ ಮಟ್ಟದ ಯಶಸ್ಸು ಪಡೆದ ಸಿನಿಮಾ. ಇನ್ನು ಅಕ್ಷಯ್ ಕುಮಾರ್ ಕರೊನಾ ನಡುವೆಯೇ ಸ್ಕಾಟ್​ಲೆಂಡ್​ನಲ್ಲಿ ಬೆಲ್​ಬಾಟಂ ಸಿನಿಮಾದ ಶೂಟಿಂಗ್​ಅನ್ನೇ ಮುಗಿಸಿದರು.

ರಿಯಲ್ ಹೀರೋ ಸೋನು ಸೂದ್

ಒಂದೆಡೆ ಸುಶಾಂತ್ ಸಾವಿನ ತನಿಖೆ, ಆರೋಪ, ಪ್ರತ್ಯಾರೋಪಗಳ ಸರಣಿ ಟ್ವೀಟ್​ಗಳ ಮಧ್ಯೆ ರಿಯಲ್ ಹೀರೋ ರೂಪದಲ್ಲಿ ಬಂದವರು ನಟ ಸೋನು ಸೂದ್. ಲಾಕ್​ಡೌನ್ ವೇಳೆ ಬರೋಬ್ಬರಿ 7 ಲಕ್ಷಕ್ಕೂ ಅಧಿಕ ನಿರಾಶ್ರಿತರನ್ನು ಅವರವರ ಮನೆಗೆ ಕಳುಹಿಸಿ ಅವರ ಪಾಲಿನ ಬಂಧುವಾದರು. ಮುಂಬೈನಲ್ಲಿ ನಿತ್ಯ 45 ಸಾವಿರ ಜನರಿಗೆ ಆಹಾರದ ಕಿಟ್ ವಿತರಿಸಿಯೂ ಸುದ್ದಿಯಾದರು. ಪ್ರವಾಸಿ ರೋಜಗಾರ್ ಯೋಜನೆ ತೆರೆದು ಕೆಲಸ ಕಳೆದುಕೊಂಡವರಿಗೆ ಕೆಲಸ ನೀಡಿದರು. ವಿದ್ಯಾರ್ಥಿಗಳಿಗೆ, ವೃದ್ಧರಿಗೆ, ಅಂಗವಿಕಲರಿಗೆ ಎಲ್ಲ ವರ್ಗದ ಜನರನ್ನೂ ತಲುಪಿ ತಮ್ಮ ಕೈಲಾದ ಸೇವೆ ಮಾಡಿದರು. ಅದರ ಮೂಲಕ ವಿಶ್ವಸಂಸ್ಥೆಯಿಂದಲೂ ಗುರುತಿಸಲ್ಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net