ಕೆಜಿಎಫ್: ಚಾಪ್ಟರ್ 1’ ಚಿತ್ರದ ಸ್ಪೆಷಲ್ ಹಾಡು ಸೇರಿ ಹಲವು ಚಿತ್ರಗಳಲ್ಲಿ ನಾಯಕಿ, ಖಳನಾಯಕಿಯಾಗಿಯೂ ಮಿಂಚಿರುವ ಖ್ಯಾತಿ ಬಾಲಿವುಡ್ ನಟಿ ಮೌನಿ ರಾಯ್‌ಗೆ ಸಲ್ಲುತ್ತದೆ. ಆದರೆ, ಇತ್ತೀಚೆಗೆ ಅವರು ವಿಚ್ಛೇದನದ ಕಾರಣದಿಂದಾಗಿ ಹೆಚ್ಚು ಸುದ್ದಿಯಾಗಿದ್ದರು. 2022ರಲ್ಲಿ ಉದ್ಯಮಿ ಸೂರಜ್ ನಂಬಿಯಾರ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅವರು, ಕೆಲ ತಿಂಗಳ ಹಿಂದೆಯಷ್ಟೇ ಬೇರ್ಪಟ್ಟಿದ್ದರು. ಆ ಬಳಿಕ ನಟಿ ಮೌನಕ್ಕೆ ಜಾರಿದ್ದರೂ, ಬೇರೆ ಬೇರೆ ವಿಚಾರಕ್ಕೆ ಎಳೆದು ತರಲಾಗುತ್ತಿತ್ತು. ಇದೀಗ ಎಲ್ಲವನ್ನೂ ಮರೆತು ಮೌನಿ ಹೊಸ ಜೀವನ ಆರಂಭಿಸುತ್ತಿದ್ದು, ಹೊಸ ಲವ್‌ಸ್ಟೋರಿಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಹೌದು, ಕನ್ನಡದ ‘ಕದಂಬ’, ‘ಕಠಾರಿವೀರ ಸುರಸುಂದರಾಂಗಿ’, ತಮಿಳಿನ ‘ಬಾಬಾ’, ಹಿಂದಿಯ ‘ರಾಕಿ: ದ ರೆಬೆಲ್’ ಸೇರಿ 40ಕ್ಕೂ ಅಧಿಕ ಸಿನಿಮಾಗಳಿಗೆ ಆ್ಯಕ್ಷನ್-ಕಟ್ ಹೇಳಿರುವ ಸುರೇಶ್ ಕೃಷ್ಣ ಸದ್ಯ ಲವ್‌ಸ್ಟೋರಿಯೊಂದನ್ನು ತೆರೆ ಮೇಲೆ ತರಲು ಸಿದ್ಧರಾಗುತ್ತಿದ್ದಾರೆ. ಈ ಪ್ರೇಮಕಥೆಗೆ ಮೌನಿ ರಾಯ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇಂದಿನ ಜನರೇಷನ್‌ಗೆ ಕನೆಕ್ಟ್ ಆಗುವಂತಹ ಪ್ರೇಮಕಥೆ ಇದಾಗಿದ್ದು, ಭಾವನಾತ್ಮಕ ಎಳೆಯ ಜತೆಗೆ ಸೌಂದರ್ಯ, ಶೃಂಗಾರದ ಅಂಶಗಳು ಇರಲಿವೆ. ಈ ಕಾರಣದಿಂದಾಗಿ ಚಿತ್ರತಂಡ ಮೌನಿರಾ ಯ್‌ರನ್ನು ಆಯ್ಕೆ ಮಾಡಿಕೊಂಡಿದೆ. ಸದ್ಯ ಚಿತ್ರದ ಪ್ರಿ-ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿದ್ದು, ಆಗಸ್ಟ್‌ನಲ್ಲಿ ಸಿನಿಮಾ ಸೆಟ್ಟೇರಲಿದೆ. ವಿಚ್ಛೇದನದ ಬಳಿಕ ಹೊಸ ಜೀವನಕ್ಕೆ ಹಾತೊರೆಯುತ್ತಿರುವ ಮೌನಿಗೆ ಈ ಹೊಸ ಲವ್‌ಸ್ಟೋರಿ ಎಷ್ಟು ಪೂರಕವಾಗಲಿದೆ ಎಂಬುದು ಕಾದು ನೋಡಬೇಕಿದೆ. ಇದಲ್ಲದೇ ಅವರು ವಿಚ್ಛೇದನಕ್ಕೂ ಮುನ್ನವೇ ತೆಲುಗಿನ ‘ವಿಶ್ವಂಭರ’, ಹಿಂದಿಯ ‘ದ ವ್‌ಸೈ’ ಚಿತ್ರಗಳಲ್ಲೂ ನಟಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. -ಏಜೆನ್ಸೀಸ್