ಎರಡು ದಶಕ ಮೀರಿದ ಸಿನಿಕರಿಯರ್ನಲ್ಲಿ "ಜೆಸ್ಸಿ ಜೈಸಿ ಕೋಯೀ ನಹೀ' ಧಾರಾವಾಹಿ ಸೇರಿ 20ಕ್ಕೂ ಅಧಿಕ ಸೀರಿಯಲ್ ಮತ್ತು ರಿಯಾಲಿಟಿ ಶೋಗಳಲ್ಲಿ, "3 ಈಡಿಯಟ್ಸ್', "ಲಾಲ್ ಸಿಂಗ್ ಛಡ್ಡಾ', "ಬಾರ್ಡರ್ 2' ಸೇರಿ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ, ಜತೆಗೆ "ಕೊಹ್ರಾ' ಸೇರಿ ಡಜನ್ಗೂ ಹೆಚ್ಚು ವೆಬ್ಸರಣಿಗಳಲ್ಲಿ ನಟಿಸಿರುವ ಹೆಗ್ಗಳಿಕೆ ನಟಿ ಮೋನಾ ಸಿಂಗ್ಗೆ ಸಲ್ಲುತ್ತದೆ. ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದರೂ, ಇತ್ತೀಚಿನ ದಿನಗಳಲ್ಲಿ ಅವರು ಕಂಟೆಂಟ್ ಪ್ರಧಾನ ಸಿನಿಮಾ, ಸರಣಿಗಳಲ್ಲಿ ಮುಖ್ಯ ಭೂಮಿಕೆಯಲ್ಲೂ ಮಿಂಚುತ್ತಿದ್ದಾರೆ. ಇದೀಗ "ಪಾನ್ ಪರ್ದಾ ಜರ್ದಾ' ಸರಣಿಯಲ್ಲಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ 44 ವರ್ಷದ ಮೋನಾ ಕೇವಲ ಆರು ತಿಂಗಳಲ್ಲಿ 15 ಕೆಜಿ ತೂಕ ಇಳಿಸಿಕೊಂಡು ಮತ್ತಷ್ಟು ಫಿಟ್ ಆಗಿದ್ದಾರೆ. ತಮ್ಮ ಫಿಟ್ನೆಸ್ ಪಯಣದ ಬಗ್ಗೆ, "ನನಗೆ ಮೊದಲಿನಿಂದಲೂ ಹೀಗೆ ಕಾಣಿಸಿಕೊಳ್ಳಬೇಕು ಎಂಬ ಆಸೆ ಇತ್ತು. ಆದರೆ, ಸೋಮಾರಿಯಾಗಿದ್ದ ಕಾರಣ ಆಗ ವರ್ಕೌಟ್ ಶುರು ಮಾಡುವೆ, ಈಗ ಡಯಟ್ ಪ್ರಾರಂಭಿಸುವೆ ಅಂತ ಮುಂದೂಡುತ್ತಾ ಬರುತ್ತಿದ್ದೆ. ಆದರೆ, ನನಗೆ ಈ ಪಾತ್ರಕ್ಕೆ ಹೀಗೇ ಕಾಣಿಸಿಕೊಳ್ಳಬೇಕು ಅಂದರು. ಪಾತ್ರ ಚೆನ್ನಾಗಿದ್ದ ಕಾರಣ ನನಗೂ ವರ್ಕೌಟ್ ಮಾಡಲು ಸ್ಫೂರ್ತಿ ದೊರೆಯಿತು. ಈಗ ಮೊದಲೇ ತೂಕ ಇಳಿಸಿಕೊಂಡರೆ ಚೆನ್ನಾಗಿರುತ್ತಿತ್ತು ಅಂತನ್ನಿಸುತ್ತಿದೆ' ಎಂದು ನಗುತ್ತಾರೆ ಮೋನಾ ಸಿಂಗ್. ಸದ್ಯ, "ಪಾನ್ ಪರ್ದಾ ಜರ್ದಾ' ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದ್ದು, ಕೆಲವೇ ತಿಂಗಳಲ್ಲಿ ಒಟಿಟಿಯಲ್ಲಿ ರಿಲೀಸ್ ಆಗಲಿದೆ.