Mandana Karimi - 16 ವರ್ಷಗಳ ನಂತರ ಭಾರತ ತೊರೆದ ಇರಾನ್​ ಸುಂದರಿ

ಮಂದನಾ ಕರಿಮಿ
ಮಂದನಾ ಕರಿಮಿ
Published on
Mandana Karimi -
ಕತ್ರಿನಾ ಕೈಫ್​, ಜಾಕ್​ಲೀನ್​ ಫರ್ನಾಂಡಿಸ್​, ಎಲ್ಲಿ ಅವ್ರಾಮ್​, ನೋರಾ ಫತೇಹಿ, ಸನ್ನಿ ಲಿಯೋನ್​, ಸೂಜಾನ್​ ಬರ್ನರ್ಟ್​​... ಹೀಗೆ ಹಲವು ವಿದೇಶಿ ನಟಿಯರು ಅವಕಾಶವನ್ನರಸಿ ಭಾರತಕ್ಕೆ ಬಂದು, ಇದೀಗ ಇಲ್ಲೇ ಬದುಕು ಕಟ್ಟಿಕೊಂಡು ಸೆಟಲ್​ ಆಗಿದ್ದಾರೆ. ಇರಾನ್​ ಮೂಲದ ಬಾಲಿವುಡ್​ ನಟಿ ಮಂದನ ಕರಿಮಿ ಇದೇ ಸಾಲಿಗೆ ಸೇರುತ್ತಾರೆ. "ರಾಯ್​', "ಭಾಗ್​ ಜಾನಿ', "ಥಾರ್​' ಸೇರಿ ಕೆಲ ಬಾಲಿವುಡ್​ ಸಿನಿಮಾಗಳು "ಬಿಗ್​ಬಾಸ್​' ಜತೆ ಕೆಲ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದ ಮಂದನ ಕಳೆದ 16 ವರ್ಷಗಳಿಂದ ಮುಂಬೈನಲ್ಲೆ ನೆಲೆಸಿದ್ದರು. ಜತೆಗೆ ಖಮೈನಿ ದುರಾಡಳಿತದ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದರು. ಹೀಗಾಗಿಯೇ ಅವರನ್ನು 2016ರಲ್ಲಿ ಇರಾನ್​ನಿಂದ ಬ್ಯಾನ್​ ಮಾಡಲಾಗಿತ್ತು. 2017ರಲ್ಲಿ ಉದ್ಯಮಿ ಗೌರವ್​ ಗುಪ್ತಾರನ್ನು ಮದುವೆಯಾದ ಮಂದನಾ, ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದರು. ಆದರೆ, ಅದೇ ವರ್ಷ ಪತಿಯ ವಿರುದ್ಧ ಹಲ್ಲೆ, ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದರು. ಕ್ರಮೇಣ 2021ರಲ್ಲಿ ವಿಚ್ಛೇದನವನ್ನೂ ಪಡೆದಿದ್ದರು.
ಇದೀಗ ಅಮೆರಿಕ ಮತ್ತು ಇಸ್ರೇಲ್​ ದೇಶಗಳು, ಇರಾನ್​ ಮೇಲೆ ದಾಳಿ ಮಾಡಿದ್ದನ್ನು ಸ್ವಾಗತಿಸಿದ್ದರು. ಆದರೆ, ಇರಾನ್​ ಅಧ್ಯಕ್ಷ ಖಮೈನಿ ಹತ್ಯೆಯ ವಿರುದ್ಧ ಭಾರತದ ಹಲವೆಡೆ ವಿರೋಧ ವ್ಯಕ್ತವಾಗಿತ್ತು. ಇದು ಮಂದನರಲ್ಲಿ ಬೇಸರ ಮೂಡಿಸಿದ್ದು, ಇದೀಗ 37 ವರ್ಷದ ನಟಿ ಭಾರತವನ್ನು ತೊರೆದು ಬೇರೆ ದೇಶದತ್ತ ಮುಖ ಮಾಡಿದ್ದಾರೆ. ಆ ಬಗ್ಗೆ, "ಹೌದು, ನನ್ನ ಎರಡನೆಯ ಮನೆಯಾದ ಭಾರತವನ್ನು ತೊರೆಯುತ್ತಿದ್ದೇನೆ. ಆದರೆ, ಇರಾನ್​ ಬ್ಯಾನ್​ ಮಾಡಿರುವ ಕಾರಣ ಅಲ್ಲಿಗೆ ಹೋಗುತ್ತಿಲ್ಲ. ಇರಾನ್​ನಲ್ಲಿ ದುರಾಡಳಿತದ ವಿರುದ್ಧದ ನನ್ನ ಹೋರಾಟಕ್ಕೆ ಭಾರತದಲ್ಲಿ ಬೆಂಬಲ ಸಿಗದಿರುವುದು ಬೇಸರ ಮೂಡಿಸಿದೆ' ಎಂದು ಹೇಳಿಕೊಂಡಿದ್ದಾರೆ.
ಕೋಟ್​:
ಖಮೈನಿಯನ್ನು ವಿರೋಧಿಸುತ್ತಿದ್ದ ಕಾರಣ ನನ್ನ ಜೀವಕ್ಕೆ ಅಪಾಯವಿದ್ದು, ನಾನು ಕೆಲ ತಿಂಗಳಿನಿಂದ ಅಜ್ಞಾತ ಸ್ಥಳದಲ್ಲಿ ಸಿಲುಕಿದ್ದೇನೆ. ಹೀಗೆ ಎಷ್ಟು ದಿನ ಇರಲು ಸಾಧ್ಯ? ಜತೆಗೆ ಕಳೆದ ಆರು ವರ್ಷಗಳಿಂದ ನಾನು ನಟನೆಯಿಂದಲೂ ದೂರವಿರುವ ಕಾರಣ, ಭಾರತ ತೊರೆಯಲು ನಿರ್ಧರಿಸಿದ್ದೇನೆ. ನಾನು ಎಲ್ಲಿಗೇ ಹೋದರೂ ಪ್ರತಿದಿನ ಬಲಿಯಾಗುತ್ತಿರುವ ಅಮಾಯಕ ಇರಾನಿಯನ್ನರ ಪರ ಮತ್ತು ಅಲ್ಲಿನ ದುರಾಡಳಿತದ ವಿರುದ್ಧ ಧ್ವನಿ ಎತ್ತುವುದನ್ನು ಮುಂದುವರಿಸುತ್ತೇನೆ.
- ಮಂದನಾ ಕರಿಮಿ, ನಟಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net