ತಮಿಳು ಖ್ಯಾತ ನಟ ರಜಿನಿಕಾಂತ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಜೈಲರ್ 2’. ನೆಲ್ಸನ್ ದಿಲೀಪ್‌ಕುಮಾರ್ ಆ್ಯಕ್ಷನ್-ಕಟ್ ಹೇಳುತ್ತಿದ್ದು, 2023ರಲ್ಲಿ ತೆರೆಕಂಡು ಯಶಸ್ವಿಯಾಗಿದ್ದ ‘ಜೈಲರ್’ ಚಿತ್ರದ ಸೀಕ್ವೆಲ್ ಇದಾಗಿದೆ. ಇನ್ನು ಮೊದಲ ಭಾಗದಲ್ಲಿ ರಜಿನಿಕಾಂತ್ ಜತೆಗೆ ರಮ್ಯಾ ಕೃಷ್ಣನ್, ವಿನಾಯಕನ್, ಯೋಗಿಬಾಬು, ವಸಂತ್ ರವಿ ಕಲಾಬಳಗದಲ್ಲಿದ್ದರು. ಇನ್ನು ಖ್ಯಾತ ನಟರಾದ ಶಿವರಾಜಕುಮಾರ್, ಮೋಹನ್‌ಲಾಲ್, ಜಾಕಿ ಶ್ರಾಫ್, ಕಿಶೋರ್, ನಟಿ ತಮನ್ನಾ ಭಾಟಿಯಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಮೆರುಗು ತಂದಿದ್ದರು. ಈ ಮೂಲಕ ಒಂದೇ ಚಿತ್ರದಲ್ಲಿ ದಕ್ಷಿಣ-ಉತ್ತರ ಭಾರತದ ಕಲಾವಿದರ ಸಂಗಮವಾಗಿತ್ತು. ‘ಜೈಲರ್ 2’ದಲ್ಲೂ ಇದು ಮುಂದುವರಿಯುತ್ತಿದೆ. ಶಿವರಾಜಕುಮಾರ್, ಮೋಹನ್‌ಲಾಲ್ ಸೀಕ್ವೆಲ್‌ನಲ್ಲೂ ಅಭಿನಯಿಸುತ್ತಿದ್ದು, ಇವರ ಜತೆಗೆ ಹೊಸ ಕಲಾವಿದರ ಸೇರ್ಪಡೆಯಾಗಿದೆ. ಆ ಮಧ್ಯೆ, ಚಿತ್ರದ ಮಹತ್ವದ ಅತಿಥಿ ಪಾತ್ರಕ್ಕೆ ಬಾಲಿವುಡ್ ನಟ ಶಾರುಖ್ ಖಾನ್‌ಗೆ ಆರ್ ಹೋಗಿತ್ತು. ಆದರೆ, ಅವರು ‘ಕಿಂಗ್’ ಶೂಟಿಂಗ್‌ನಲ್ಲಿ ಬಿಜಿ ಇರುವ ಕಾರಣ ಅದನ್ನು ನಿರಾಕರಿಸಿದ್ದರು. ಹಾಗಾಗಿ, ಚಿತ್ರತಂಡ ಬೇರೆ ಕಲಾವಿದರ ಹುಡುಕಾಟ ನಡೆಸಿತ್ತು. ಇದೀಗ ಶಾರುಖ್ ಜಾಗಕ್ಕೆ ಚಿತ್ರತಂಡ ಬಾಲಿವುಡ್ ನಟ ಹೃತಿಕ್ ರೋಷನ್‌ಗೆ ಆರ್ ನೀಡಿದ್ದು, ಅದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಸುದ್ದಿಯಾಗಿದೆ. ಈಗಾಗಲೇ ಹೃತಿಕ್ ಜತೆ ಚಿತ್ರತಂಡ ಮಾತುಕತೆ ನಡೆಸಿದ್ದು, ಸಿನಿಮಾ ಸ್ಕ್ರಿಪ್ಟ್, ತಾರಾ ಬಳಗದ ಬಗ್ಗೆ ಮೆಚ್ಚುಗೆ ಸೂಚಿಸಿ, ಅತಿಥಿ ಪಾತ್ರಕ್ಕೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯದಲ್ಲಿ ಈ ವಿಷಯವನ್ನು ಚಿತ್ರತಂಡ ಅಧಿಕೃತಗೊಳಿಸಲಿದೆ. ‘ಜೈಲರ್ 2’ ಶೂಟಿಂಗ್ ಪೂರ್ಣಗೊಂಡಿದ್ದು, ಹೃತಿಕ್ ರೋಷನ್ ಭಾಗದ ಚಿತ್ರೀಕರಣ ಮಾತ್ರ ಬಾಕಿಯಿರಿಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಸದ್ಯ ಪೋಸ್ಟ್ -ಪ್ರೊಡಕ್ಷನ್ ಕಾರ್ಯಗಳು ಆರಂಭಗೊಂಡಿದ್ದು, ಇದೇ ಸೆಪ್ಟೆಂಬರ್‌ಗೆ ‘ಜೈಲರ್ 2’ ತೆರೆ ಮೇಲೆ ಬರಲು ಸಿದ್ಧವಾಗುತ್ತಿದೆ. -ಏಜೆನ್ಸೀಸ್