

ಶಿವಮೊಗ್ಗ: ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ರಕ್ತಹೀನತೆ ನಿವಾರಣೆಗಾಗಿ ಜಾರಿಗೆ ತಂದಿರುವ ಪಿಎಂ ಪೋಷಣ್ ಮಧ್ಯಾಹ್ನ ಉಪಹಾರ ಯೋಜನೆಯಡಿ 9 ಮತ್ತು 10ನೇ ತರಗತಿ ಮಕ್ಕಳಿಗೂ ಇನ್ಮುಂದೆ ಬೇಯಿಸಿದ ಮೊಟ್ಟೆ ನೀಡಲಾಗುವುದು. ಮೊಟ್ಟೆ ಸೇವಿಸದವರಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ವಿತರಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಓ ಸ್ನೇಹಲ್ ಲೋಖಂಡೆ ಹೇಳಿದರು.
ತಾಲೂಕಿನ ಪಿಳ್ಳಂಗಿರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಮೊಟ್ಟೆ ವಿತರಣೆ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ 1ರಿಂದ 8ನೇ ತರಗತಿ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವನ್ನು ವಾರದಲ್ಲಿ ಒಂದು ದಿನ ನೀಡಲಾಗುತ್ತಿತ್ತು. ಮೊಟ್ಟೆ ಸೇವಿಸದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ವಾರ್ಷಿಕ ಒಟ್ಟು 46 ದಿನ ವಿತರಿಸಲಾಗುತ್ತಿತ್ತು. ಇದೀಗ ಎಸ್ಸೆಸ್ಸೆಲ್ಸಿವರೆಗೂ ಪೌಷ್ಟಿಕಾಂಶವುಳ್ಳ ಪೂರಕ ಆಹಾರ ನೀಡಬೇಕಂದು ನಿರ್ಧರಿಸಿ ಸರ್ಕಾರ ಪ್ರಸಕ್ತ ಸಾಲಿನ ಮಕ್ಕಳಿಗೂ ಈ ಯೋಜನೆ ವಿಸ್ತರಿಸಿದೆ ಎಂದರು.
ಮಕ್ಕಳಿಗೆ ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಪೌಷ್ಟಿಕಾಂಶ ಆಹಾರ ಅಗತ್ಯವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಇದು ಸಹಕಾರಿಯಾಗಿದೆ. ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಇದು ಸಹಕರಿಸುತ್ತದೆ. ವಿದ್ಯಾರ್ಥಿಗಳ ಇದರ ಸದುಪಯೋಗ ಪಡೆದು ಉತ್ತಮ ವಿದ್ಯಾಭ್ಯಾಸ ಪಡೆದು ಉತ್ತಮ ನಾಗರಿಕರಾಗಬೇಕು ಎಂದು ಹೇಳಿದರು.
ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಮಾತನಾಡಿ, ಜಿಲ್ಲೆಯಲ್ಲಿ 1,59,507 ವಿದ್ಯಾರ್ಥಿಗಳಿದ್ದು ವಾರ್ಷಿಕವಾಗಿ 7.65 ಕೋಟಿ ರೂ.ಅನುದಾನ ಈ ಯೋಜನೆಯಡಿ ನಿಗದಿಯಾಗಿದೆ. ಇಂದು ಪಿಳ್ಳಂಗಿರಿ ಪ್ರೌಢಶಾಲೆಯಲ್ಲಿ ಹಾಜರಿದ್ದ 254 ಮಕ್ಕಳ ಪೈಕಿ 224 ಮಕ್ಕಳು ಮೊಟ್ಟೆ, 29 ಮಕ್ಕಳು ಶೇಂಗಾ ಚಿಕ್ಕಿ ಮತ್ತು 1 ಮಗುವಿಗೆ ಬಾಳೆ ಹಣ್ಣು ನೀಡಲಾಯಿತು ಎಂದು ತಿಳಿಸಿದರು.
ಬಿಇಒ ಪಿ.ನಾಗರಾಜ್, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ದಾದಾಪೀರ್, ಶಾಲಾ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ, ಪ್ರಾಥಮಿಕ ಮತ್ತು ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷರು, ಸಹ ಶಿಕ್ಷಕರು, ಶಿಕ್ಷಣ ಸಂಯೋಜನಾಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.