ಐತಿಹಾಸಿಕ ಒಪ್ಪಂದ; ಪ್ರತ್ಯೇಕ ಬೋಡೋಲ್ಯಾಂಡ್​ ಬೇಡಿಕೆ ಅಂತ್ಯ

Editorial 28 Jan 20
Published on

ಭಾರತ ವಿಶಾಲವಾದ ರಾಷ್ಟ್ರ. ಭಿನ್ನ-ಭಿನ್ನ ಸಂಸ್ಕೃತಿ, ಭಾಷಾವೈವಿಧ್ಯದ ಹಿರಿಮೆ. ಆದರೆ, ಬೃಹತ್ ರಾಷ್ಟ್ರದಲ್ಲಿ ಸಮಸ್ಯೆಯ ಸ್ವರೂಪಗಳು, ಅದರ ತೀವ್ರತೆಗಳೂ ಅಷ್ಟೇ ಭಿನ್ನ. ಈ ಸಮಸ್ಯೆಗಳು ಅತಿರೇಕಕ್ಕೆ ಹೋದಾಗ ಆಗಾಗ, ಕೆಲ ಶಕ್ತಿಗಳಿಂದ ಒಡಕಿನ ದನಿ ಕೇಳಿಬರುತ್ತದೆ. ಆದರೆ, ಇಂಥ ಅಪಸ್ವರದಿಂದ ಯಾರಿಗೂ ಲಾಭವಿಲ್ಲ. ಬದಲಾಗಿ ಹಾನಿಯೇ ಹೆಚ್ಚು. ಯಾವುದೇ ಸಮಸ್ಯೆಯ ಪರಿಹಾರಕ್ಕೆ ‘ಪ್ರತ್ಯೇಕತೆ’ ಪರಿಹಾರ ಅಲ್ಲವೇ ಅಲ್ಲ. ಬದಲಾಗಿ ‘ಒಳಗೊಳ್ಳುವಿಕೆ’ಯೇ ಶಾಶ್ವತ ಮತ್ತು ಉತ್ತಮವಾದ ಮಾರ್ಗ. ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿಯನ್ವಯ ಇದ್ದ ವಿಶೇಷ ಸ್ಥಾನಮಾನ ಹಿಂಪಡೆದು, ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿದ ಬಳಿಕ, ನಿಧಾನವಾಗಿ ಅಲ್ಲಿನ ಸ್ಥಿತಿ ಬದಲಾಗುತ್ತಿದೆ. ಆ ಪ್ರದೇಶ ಅಭಿವೃದ್ಧಿಯ ಪಥಕ್ಕೆ ಬರಲು ಇನ್ನಷ್ಟು ಕಾಲಾವಕಾಶ ಬೇಕು ಎಂಬುದೇನೋ ನಿಜವೇ. ಆದರೆ, ‘ಪ್ರತ್ಯೇಕತೆ’ಯ ಭಾವ ಇಲ್ಲವಾಗುತ್ತಿದೆ.

ಇನ್ನು, ‘ಸಪ್ತ ಸಹೋದರಿ’ಯರೆಂದೇ ಕರೆಯಲಾಗುವ ಈಶಾನ್ಯದ ಏಳು ರಾಜ್ಯಗಳಿಗೆ, ಅಲ್ಲಿನ ಸಮಸ್ಯೆಗಳಿಗೆ, ಆ ಜನರ ಆಶೋತ್ತರಗಳಿಗೆ ಹಿಂದಿನ ಕೇಂದ್ರ ಸರ್ಕಾರಗಳು ಸ್ಪಂದಿಸಿದ್ದು ವಿರಳ. ಹಾಗಾಗಿ, ಸ್ವಾಭಾವಿಕವಾಗಿಯೇ ಅಲ್ಲಿನ ಜನರಲ್ಲಿ ನಿರಾಸೆ ಮಡುಗಟ್ಟಿ, ಅದು ಆಕ್ರೋಶವಾಗಿ ಮಾರ್ಪಟ್ಟಿತ್ತು. ಕಳೆದ ಐದು ವರ್ಷಗಳಲ್ಲಿ ಈ ಏಳು ರಾಜ್ಯಗಳ ಮೂಲಸೌಕರ್ಯ ಅಭಿವೃದ್ಧಿಗೆ ದಿಟ್ಟ ಕ್ರಮಗಳನ್ನು ಕೈಗೊಂಡ ಬಳಿಕ, ಅಲ್ಲಿ ಹೊಸ ಆಶಾವಾದ ಹುಟ್ಟಿಕೊಂಡಿದೆ. ಆದರೂ, ಅಶಾಂತಿಗೆ ಕಾರಣವಾಗಿದ್ದ ಬೋಡೋ ಬಣಗಳು ಸೇರಿ ಕೆಲವು ಸಂಘಟನೆಗಳ ಚಟುವಟಿಕೆಗಳು ಆತಂಕಕ್ಕೆ ಕಾರಣವಾಗಿದ್ದವು. ಆ ನಿಟ್ಟಿನಲ್ಲೂ ಸಮಾಧಾನದ ಸುದ್ದಿಯೊಂದು ಹೊರಬಿದ್ದಿದೆ. ಶಾಂತಿ ಸ್ಥಾಪನೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಿಷೇಧಿತ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ (ಎನ್​ಡಿಎಫ್​ಬಿ)ನ ಎಲ್ಲ ಬಣಗಳ ಪ್ರತಿನಿಧಿಗಳೊಂದಿಗೆ ಸೋಮವಾರ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದೆ. ಗೃಹ ಸಚಿವ ಅಮಿತ್ ಷಾ ಮತ್ತು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೊನೊವಾಲ್ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಬೋಡೋ ಉಗ್ರರ ಸಂಘಟನೆಯ ಅನೇಕ ಬಣಗಳು ಹಲವು ವರ್ಷಗಳಿಂದ ನಡೆಸುತ್ತಿದ್ದ ಹಿಂಸಾಚಾರ ಈ ಮೂಲಕ ಕೊನೆಯಾಗಲಿದೆ. ಅಲ್ಲದೆ, ‘ಪ್ರತ್ಯೇಕ ಬೋಡೋಲ್ಯಾಂಡ್’ ಬೇಡಿಕೆ ಕೂಡ ಅಂತ್ಯಗೊಳ್ಳಲಿದೆ. ಇದೇ ತಿಂಗಳ 30ರಂದು 1550 ಉಗ್ರ ಸಂಘಟನೆಗಳ ಸದಸ್ಯರು 130 ಶಸ್ತ್ರಾಸ್ತ್ರಗಳೊಂದಿಗೆ ಶರಣಾಗಲಿರುವುದು, ಮಹತ್ವದ ವಿದ್ಯಮಾನ. ‘ಎನ್​ಡಿಎಫ್​ಬಿಯ ಎಲ್ಲ ಬಣಗಳು ಹಿಂಸೆ ತೊರೆಯುವ ನಿರ್ಧಾರ ತೆಗೆದುಕೊಂಡಿದ್ದು, ಉಗ್ರರಿಗೆ ನೀಡಲಾಗಿರುವ ಭರವಸೆಯನ್ನು ಕಾಲಮಿತಿಯಲ್ಲಿ ಈಡೇರಿಸಲಾಗುವುದು’ ಎಂದು ಷಾ ಪ್ರತಿಕ್ರಿಯಿಸಿದ್ದಾರೆ.

ಈ ಎಲ್ಲ ಬಣಗಳು ಶಾಂತಿಗೆ ಮಾರಕವಾಗಿದ್ದವು ಅಲ್ಲದೆ ಭಾರಿ ಅಭದ್ರತೆಯನ್ನು ಸೃಷ್ಟಿಸಿದ್ದವು. ಹಿಂಸಾಚಾರದಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ತಡವಾಗಿಯಾದರೂ ಅರ್ಥಮಾಡಿಕೊಂಡಿರುವುದು ಸಮಾಧಾನಕರ. ಹಳೆಯ ಮತ್ತು ದೊಡ್ಡ ಸಮಸ್ಯೆಯೊಂದು ಪರಿಹಾರ ಕಂಡಿರುವುದು, ಈಶಾನ್ಯ ರಾಜ್ಯಗಳ ಪಾಲಿಗೆ ಭರವಸೆಯ ಕಿರಣವೇ. ಈ ನಿಟ್ಟಿನಲ್ಲಿ ಮಾತುಕತೆಯ ದಾರಿ ತೆರೆದಿಟ್ಟು, ಒಪ್ಪಂದ ಏರ್ಪಡುವಂತೆ ಮಾಡಿದ ಅಸ್ಸಾಂ ಮತ್ತು ಕೇಂದ್ರ ಸರ್ಕಾರದ ಪ್ರಯತ್ನ ಶ್ಲಾಘನೀಯ. ಇನ್ನಾದರೂ, ಅಸ್ಸಾಂ ಸೇರಿ ಈಶಾನ್ಯ ರಾಜ್ಯಗಳು ಒಳ್ಳೆಯ ದಿನಗಳನ್ನು ಕಾಣುವಂತಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net