

ಬೆಂಗಳೂರು: ಮೇಕೆದಾಟು ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ತಂದರೆ ಮಾತ್ರ ನಗರದ ನೀರಿನ ಬವಣೆ ತಪ್ಪಿಸಬಹುದು. ಇಲ್ಲವಾದರೆ ಬೆಂಗಳೂರು ನಗರ ಅತಿ ದೊಡ್ಡ ಜಲ ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದೆ ಎಂದು ಮಾಜಿ ಪ್ರಧಾನಿಗಳು ತೀವ್ರ ಆತಂಕ ವ್ಯಕ್ತಪಡಿಸಿದರು.
ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ಕೂಡಲೇ ಅನುಮತಿ ಕೊಡುವಂತೆ ಮನವಿ ಮಾಡಿದ್ದೇವೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರ. ದೇಶದ ಎಲ್ಲ ಜನರಿಗೆ ಉದ್ಯೋಗ, ಜೀವನೋಪಾಯ ನೀಡಿ ಸಲಹುತ್ತಿದೆ. ಬೆಂಗಳೂರು ನಗರದ ಜನಸಂಖ್ಯೆ ಸದ್ಯಕ್ಕೆ 135 ಲಕ್ಷವಿದ್ದು, 2044ರ ವೇಳೆ ಈ ಪ್ರಮಾಣ 3 ಕೋಟಿ ಮೀರಲಿದೆ. ಇಷ್ಟು ದೊಡ್ಡ ಪ್ರಮಾಣದ ಜನಸಂಖ್ಯೆಗೆ 64 ಟಿಎಂಸಿ ನೀರಿನ ಅಗತ್ಯ ಇದೆ ಎಂದರು.
ತಮಿಳುನಾಡಿಗೆ ದೈತ್ಯ ರಾಜಕೀಯ ಶಕ್ತಿ ಇದೆ. ಅವರಿಗೆ ಎಷ್ಟು ನೀರು ಕೊಟ್ಟರು ಸಾಲದು. ತಮಿಳುನಾಡಿನಲ್ಲಿ ಎಲ್ಲ ಕಡೆ ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆ. ಅವರಿಗೆ ಸಮೃದ್ಧವಾಗಿ ಮಳೆ ಬಂದರೂ ನೀರು ಬೇಕು ಎಂದು ಕೇಳುತ್ತಾರೆ. ತಮಿಳುನಾಡಿನ ನೀರಾವರಿಯ ಬಗ್ಗೆ ಕೃಷಿ ವಿಜ್ಞಾನಿ ಸ್ವಾಮಿನಾಥನ್ ಅವರು ವರದಿ ಕೊಟ್ಟಿದ್ದಾರೆ. ಅವರು ವಾರ್ಷಿಕ 3 ಬೆಳೆ ಅರಾಮವಾಗಿ ಬೆಳೆಯುತ್ತಾರೆ. ನಮಗೆ ಒಂದು ಬೆಳೆ ಬೆಳೆಯುವುದಕ್ಕೆ ಕೂಡ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಮಿಳುನಾಡಿನಲ್ಲಿ ಕುರುವೈ, ಸಾಂಬಾ, ತಾಲಾಡಿ ಹಾಗೂ ಇನಾ ಬೇಸಾಯ ಸೇರಿದಂತೆ ಒಟ್ಟು 24.71 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಅದೇ ಕರ್ನಾಟಕಕ್ಕೆ ಬಂದರೆ ಎಲ್ಲ ರೀತಿಯ ಬೆಳೆಗಳನ್ನು ಸೇರಿಸಿದರೂ 18.85 ಲಕ್ಷ ಎಕರೆ ಮೀರುವುದಿಲ್ಲ ಎಂದು ಅಂಕಿ-ಅಂಶಗಳ ಸಮೇತ ವಿವರಣೆ ನೀಡಿದರು.
ಕಾವೇರಿ ಜಲ ವಿವಾದ ಮಂಡಳಿ ಏಕಪಕ್ಷೀಯವಾಗಿ 1991ರಲ್ಲಿ ಮಧ್ಯಂತರ ಆದೇಶ ನೀಡಿ, ಕರ್ನಾಟಕ ರಾಜ್ಯ ತನ್ನ ನೀರಾವರಿ ಅಚ್ಚುಕಟ್ಟನ್ನು 11.20 ಲಕ್ಷ ಹೆಕ್ಟೇರ್‌ಗೆ ಸೀಮಿತಗೊಳಿಸುವಂತೆ ಮತ್ತು ತಮಿಳುನಾಡಿನ 205 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ಆದೇಶಿಸಿರುವುದರಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಕಾವೇರಿ ಕಣಿವೆಯಲ್ಲಿ ಕೃಷ್ಣರಾಜ ಸಾಗರ, ಹಾರಂಗಿ, ಕಬಿನಿ, ಹೇಮಾವತಿ ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿವರ್ಷ ಜೂನ್ ನಿಂದ ಮೇ ವರೆಗೆ ಪ್ರತಿ ತಿಂಗಳು 177.25 ಟಿಎಂಸಿ ನೀರು ಬಿಡಬೇಕು ಎನ್ನುವ ಆದೇಶದಿಂದ ಕ್ಲಿಷ್ಟ ಮತ್ತು ಬರಗಾಲದಲ್ಲಿ ಕರ್ನಾಟಕ ರಾಜ್ಯವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಬಗ್ಗೆಯೂ ಸಮಿತಿ ಗಮನಕ್ಕೆ ತರಲಾಗಿದೆ ಎಂದು ದೇವೇಗೌಡರು ಹೇಳಿದರು.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎನ್. ತಿಪ್ಪೇಸ್ವಾಮಿ, ಟಿ.ಎ.ಶರವಣ, ಮಾಜಿ ಸದಸ್ಯರಾದ ಚೌಡರೆಡ್ಡಿ ತೂಪಲ್ಲಿ ಹಾಜರಿದ್ದರು.