ರಸ್ತೆಗೆ ಉರುಳಿ ಬಿದ್ದ ಬಿಎಂಟಿಸಿ ಬಸ್

BMTC
Published on

ಬೆಂಗಳೂರು: ಬಿಎಂಟಿಸಿ ವಾಯುವಜ್ರ ಬಸ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಮೇಲ್ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ಉರುಳಿ ರಸ್ತೆಗೆ ಬಿದ್ದಿರುವ ಪ್ರಕರಣ ಸೋಮವಾರ ರಾತ್ರಿ ಬೆಂಗಳೂರು-ಬಳ್ಳಾರಿ ರಸ್ತೆಯ ಬಿಡಿಎ ಮೇಲ್ಸೇತುವೆ ಬಳಿ ನಡೆದಿದೆ.
ಘಟನೆ ವೇಳೆ ಬಸ್‌ನಲ್ಲಿ ಚಾಲನಾ ಸಿಬ್ಬಂದಿ ಹಾಗೂ ೧೧ ಮಂದಿ ಪ್ರಯಾಣಿಕರು ಇದ್ದರು. ಚಾಲಕ ಮುನ್ನಾವರ್ ಷರೀಫ್, ಮಹಿಳೆ ಸೇರಿ ಐದಾರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಉಳಿದಂತೆ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಜು ಹೊಡೆದು ಹೊರಗೆ ತರಲಾಗಿದೆ:
ರಾತ್ರಿ ೧೧.೩೦ರ ಸುಮಾರಿಗೆ ಬಿಎಂಟಿಸಿಯ ವಾಯು ವಜ್ರ ಬಸ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡಗೆ ತೆರಳುತ್ತಿತ್ತು. ಈ ವೇಳೆ ಮಾರ್ಗ ಮಧ್ಯೆ ಬಿಡಿಎ ಮೇಲ್ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್, ಮೇಲ್ಸೇತುವೆ ಆರಂಭದ ಎಡಭಾಗದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ ಉರುಳಿ ಬಿದ್ದಿದೆ. ಈ ವೇಳೆ ಸ್ಥಳೀಯರು ಹಾಗೂ ವಾಹನ ಸವಾರರು ನೆರವಿಗೆ ಧಾವಿಸಿ, ಬಸ್‌ನ ಮುಂಭಾಗದ ಗಾಜು ಒಡೆದು ಚಾಲನಾ ಸಿಬ್ಬಂದಿ ಹಾಗೂ ಪ್ರಯಾಣಿಕರನ್ನು ಹೊರಗೆ ಕರೆತಂದಿದ್ದಾರೆ. ಅಪಘಾತದ ವೇಳೆ ಬಸ್‌ನ ಚಾಲಕ ಹಾಗೂ ಐದಾರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಈ ಸಂಬಂಧ ಸದಾಶಿವನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net