‘ಬ್ಲೂ ಡ್ರಮ್’ ಕೊಲೆ ಪ್ರಕರಣದ ತೀರ್ಪು; ಮೃತನ ಪತ್ನಿ, ಪ್ರಿಯಕರ ದೋಷಿಗಳು ಎಂದ ಕೋರ್ಟ್ | Blue Drum Murder

ಮೀರತ್‌ನ ಬಹುಚರ್ಚಿತ ‘ಬ್ಲೂ ಡ್ರಮ್’ ಕೊಲೆ ಪ್ರಕರಣದಲ್ಲಿ ಸೌರಭ್ ರಾಜ್‌ಪುತ್ ಹತ್ಯೆ ಆರೋಪ ಸಾಬೀತಾಗಿದೆ. ಸೌರಭ್ ಅವರ ಪತ್ನಿ ಮುಸ್ಕಾನ್ ರಾಸ್ತೋಗಿ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾನನ್ನು ನ್ಯಾಯಾಲಯ ಅಫರಾಧಿಗಳೆಂದು ತೀರ್ಪು ನೀಡಿದೆ.
Meerut Blue Drum Murder
ಮೀರತ್ ಬ್ಲೂ ಡ್ರಮ್ ಕೊಲೆ ಪ್ರಕರಣದಲ್ಲಿ ಕೋರ್ಟ್​ ತೀರ್ಪು
Published on: 

Meerut Blue Drum Murder: ದೇಶಾದ್ಯಂತ ಗಮನ ಸೆಳೆದಿದ್ದ ಮೀರತ್‌ನ ‘ಬ್ಲೂ ಡ್ರಮ್’ ಕೊಲೆ ಪ್ರಕರಣದಲ್ಲಿ ಸೌರಭ್ ರಾಜ್‌ಪುತ್ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ, ಅವರ ಪತ್ನಿ ಮುಸ್ಕಾನ್ ರಾಸ್ತೋಗಿ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಅವರನ್ನು ದೋಷಿಗಳೆಂದು ಸ್ಥಳೀಯ ಕೋರ್ಟ್​ ತೀರ್ಪು ನೀಡಿದೆ.

ಪ್ರಿಯಕರನ ಜೊತೆ ಸೇರಿ ಪತಿಯನ್ನು ಹತ್ಯೆ ಮಾಡಿದ್ದ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಮಾಜಿ ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಾಜ್‌ಪುತ್ (29) ಅವರನ್ನು ಹತ್ಯೆ ಮಾಡಿ, ಮೃತದೇಹವನ್ನು ತುಂಡರಿಸಿ ಕಾಂಕ್ರೀಟ್ ತುಂಬಿದ ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಬಚ್ಚಿಟ್ಟಿದ್ದರು ಎಂದು ಆರೋಪಿಸಲಾಗಿತ್ತು.

126 ವಿಚಾರಣೆ, 22 ಸಾಕ್ಷಿಗಳ ಹೇಳಿಕೆ

126 ವಿಚಾರಣೆಗಳ ಬಳಿಕ 22 ಸಾಕ್ಷಿಗಳ ಹೇಳಿಕೆಗಳನ್ನು ಆಲಿಸಿದ ಕೋರ್ಟ್, ಮುಸ್ಕಾನ್ ರಾಸ್ತೋಗಿ ಹಾಗೂ ಸಾಹಿಲ್ ಶುಕ್ಲಾಯನ್ನು ದೋಷಿಗಳೆಂದು ಘೋಷಿಸಿದೆ. ಆದರೆ, ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ಇನ್ನಷ್ಟೇ ಪ್ರಕಟಿಸಬೇಕಿದೆ. ಇಬ್ಬರಿಗೂ ಮರಣದಂಡನೆ ವಿಧಿಸುವಂತೆ ಕೋರಲಾಗುವುದು ಎಂದು ಸರ್ಕಾರಿ ಅಭಿಯೋಜಕರು ತಿಳಿಸಿದ್ದಾರೆ.

ಆಹಾರದಲ್ಲಿ ಔಷಧಿ ಬೆರೆಸಿ ಕೊಲೆ?

ಪೊಲೀಸರ ಪ್ರಕಾರ, 2025ರ ಮಾರ್ಚ್ 3ರಂದು ಮೀರತ್‌ನ ಇಂದ್ರಾ ನಗರದಲ್ಲಿನ ಮನೆಯಲ್ಲಿ ಮುಸ್ಕಾನ್ ತನ್ನ ಪತಿ ಸೌರಭ್ ಅವರ ಆಹಾರದಲ್ಲಿ ಔಷಧಿ ಬೆರೆಸಿ ನೀಡಿದ್ದರು. ಬಳಿಕ ಅಲ್ಲಿಗೆ ಬಂದ ಸಾಹಿಲ್ ಶುಕ್ಲಾ ಜೊತೆ ಸೇರಿ ಸೌರಭ್ ಅವರನ್ನು ಚಾಕುವಿನಿಂದ ಹತ್ಯೆ ಮಾಡಿದ್ದರು ಎನ್ನಲಾಗಿದೆ. ನಂತರ ಬಾತ್‌ರೂಮ್‌ನಲ್ಲಿ ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿ, ದುರ್ವಾಸನೆ ಹೊರಬಾರದಂತೆ ನೀಲಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಬಚ್ಚಿಟ್ಟಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಡ್ರಮ್‌ನಲ್ಲಿ ಕಾಂಕ್ರೀಟ್ ತುಂಬಿಸಿ ಬಚ್ಚಿಟ್ಟಿದ್ದ ಕಿರಾತಕರು

ಮೃತದೇಹದ ತುಂಡುಗಳನ್ನು ಡ್ರಮ್‌ನಲ್ಲಿ ಇರಿಸಿ, ಮರಳು, ನೀರು ಮತ್ತು ಸಿಮೆಂಟ್ ಮಿಶ್ರಣದಿಂದ ಮುಚ್ಚಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಇಬ್ಬರೂ ಹಿಮಾಚಲ ಪ್ರದೇಶಕ್ಕೆ ತೆರಳಿದ್ದರು ಎನ್ನಲಾಗಿದೆ. ಸೌರಭ್ ಅವರ ಮೊಬೈಲ್‌ನಿಂದ ಕುಟುಂಬಸ್ಥರಿಗೆ ಸಂದೇಶ ಕಳುಹಿಸಿ, ಅವರು ಜೀವಂತವಾಗಿದ್ದು ಕೆಲಸದ ನಿಮಿತ್ತ ಪ್ರಯಾಣಿಸುತ್ತಿದ್ದಾರೆ ಎಂಬಂತೆ ಬಿಂಬಿಸಲು ಯತ್ನಿಸಿದ್ದರು.

14 ದಿನಗಳ ಬಳಿಕ ಡ್ರಮ್‌ನಲ್ಲಿ ಮೃತದೇಹ ಪತ್ತೆ

ಮಾರ್ಚ್ 17ರಂದು ಅನುಮಾನಗೊಂಡ ಸಂಬಂಧಿಕರು ಪೊಲೀಸರೊಂದಿಗೆ ಸೌರಭ್ ಅವರ ಮನೆಗೆ ತೆರಳಿದ್ದರು. ಈ ವೇಳೆ ನೀಲಿ ಡ್ರಮ್‌ ತೆರೆಯಲಾಗಿದ್ದು, ಸೌರಭ್ ಅವರ ಮೃತದೇಹದ ಅವಶೇಷಗಳು ಪತ್ತೆಯಾಗಿದ್ದವು. ಎರಡು ದಿನಗಳ ಬಳಿಕ ಮುಸ್ಕಾನ್ ರಾಸ್ತೋಗಿ ಮತ್ತು ಸಾಹಿಲ್ ಶುಕ್ಲಾ ಅವರನ್ನು ಪೊಲೀಸರು ಬಂಧಿಸಿದ್ದರು.

ಡ್ರಮ್, ಸಿಮೆಂಟ್ ಖರೀದಿದ್ದ ಆರೋಪಿಗಳು

ನೀಲಿ ಡ್ರಮ್, ಸಿಮೆಂಟ್, ಮರಳು, ಚಾಕು ಹಾಗೂ ರೇಜರ್ ಖರೀದಿಸಿದ್ದ ಬಗ್ಗೆ ಅಂಗಡಿ ಮಾಲೀಕರು ಸಾಕ್ಷ್ಯ ನೀಡಿದ್ದಾರೆ. ಕಾಲ್ ಡೀಟೇಲ್ ಹಾಗೂ ಮೊಬೈಲ್ ಟವರ್ ಲೊಕೇಶನ್‌ಗಳು ಕೊಲೆ ನಡೆದ ವೇಳೆ ಸಾಹಿಲ್ ಮನೆಯಲ್ಲಿದ್ದುದನ್ನು ತೋರಿಸಿವೆ ಎಂದು ವಕೀಲರು ತಿಳಿಸಿದ್ದಾರೆ. ಶಿಮ್ಲಾ, ಮನಾಲಿ ಪ್ರಯಾಣಕ್ಕೂ ಈ ದಾಖಲೆಗಳು ಸಂಪರ್ಕ ಹೊಂದಿದ್ದವು ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ LPG ಸಿಲಿಂಡರ್‌ಗಳ ಸರಣಿ ಸ್ಫೋಟ; ಶಾಲೆ ಬಳಿಯೇ ಭಾರೀ ಅವಘಡ!| LPG Cylinder Blast

ಪೋಸ್ಟ್‌ಮಾರ್ಟಂನಲ್ಲಿ ಸೌರಭ್ ಚಾಕು ಇರಿತದಿಂದ ಸತ್ತಿದ್ದು ದೃಢಪಟ್ಟಿತ್ತು. ಇಂತಹ ಕೃತ್ಯಗಳು ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತವೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net