

ಪಂಕಜ ಕೆ.ಎಂ. ಬೆಂಗಳೂರು
ಬೇಸಿಗೆ ಬಂತೆಂದರೆ ಪ್ರತಿವರ್ಷ ರಕ್ತದ ಕೊರತೆ ಸಾಮಾನ್ಯವಾಗಿ ಕಾಡುತ್ತದೆ. ಆದರೆ ಈ ಬಾರಿ ಲೋಕಸಭಾ ಚುನಾವಣೆ ಬರಲಿರುವುದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಇದಕ್ಕೆ ಪೂರಕ ಎಂಬಂತೆ, ಕಳೆದ ಎರಡು ತಿಂಗಳಲ್ಲಿ ರಾಜ್ಯಾದ್ಯಂತ ರಕ್ತದ ಸಂಗ್ರಹ ಪ್ರಮಾಣ ಶೇ. 40 ಕುಸಿದಿದ್ದು, ಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವಂತೆ ರಕ್ತ ನಿಧಿಗಳು ಮನವಿ ಮಾಡುತ್ತಿವೆ.
ಸಾಮಾನ್ಯವಾಗಿ ರಕ್ತದಾನ ಶಿಬಿರಗಳನ್ನು ಕಾಲೇಜುಗಳು, ಐಟಿ- ಬಿಟಿ ಕಂಪನಿಗಳು, ಗಣ್ಯರ ಜನ್ಮದಿನದ ಸಮಾರಂಭ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆಯೋಜಿಸಲಾಗುತ್ತದೆ. ಬೇಸಿಗೆ ನೀರಿನ ಸಮಸ್ಯೆ ಇತ್ಯಾದಿ ಕಾರಣಗಳಿಂದ ಬಹಳಷ್ಟು ಐಟಿ- ಬಿಟಿ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್‌ಫ್ರಂ ಹೋಂ ನೀಡಿರುವುದರಿಂದ ಈ ವರ್ಗದ ದಾನಿಗಳಿಂದ ರಕ್ತ ಪಡೆಯಲು ಸಾಧ್ಯವಾಗುತ್ತಿಲ್ಲ. ಇನ್ನು ಪರೀಕ್ಷೆ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ಶಿಬಿರ ನಡೆಸಲು ಆಗುವುದಿಲ್ಲ. ನೀತಿ ಸಂಹಿತೆ ಜಾರಿಯಾಗುತ್ತಲೇ ಸಾರ್ವಜನಿಕ ಕಾರ್ಯಕ್ರಮಗಳು ನಡೆಯುವುದಿಲ್ಲ. ಇದರಿಂದ ರಕ್ತ ಸಂಗ್ರಹ ಮತ್ತಷ್ಟು ಸಮಸ್ಯೆಯಾಗಲಿದೆ ಎಂದು ರಕ್ತನಿಧಿಯೊಂದರ ಸಿಬ್ಬಂದಿ ಕಳವಳ ವ್ಯಕ್ತಪಡಿಸಿದ್ದಾರೆ.
ಬೇಸಿಗೆಯಲ್ಲಿ ನಿರ್ಜಲೀಕರಣ ಸೇರಿ ನಾನಾ ಆರೋಗ್ಯ ಸಮಸ್ಯೆ ಕಾಡುವ ಹಿನ್ನೆಲೆಯಲ್ಲೂ ದಾನಿಗಳ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೆ ನೀತಿಸಂಹಿತೆ ಪರಿಣಾಮ ಸಾರ್ವಜನಿಕ ಕಾರ್ಯಕ್ರಮಗಳು ನಡೆಸಲು ಕಷ್ಟಸಾಧ್ಯ. ಬಹಳಷ್ಟು ಯುವಜನರು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲಿರುವುದರಿಂದ ರಕ್ತದಾನಕ್ಕೆ ಮುಂದಾಗುವವರ ಅಭಾವ ಕಾಡಲಿದೆ.
ರೋಗಿಗಳಿಗೂ ಸಮಸ್ಯೆ: ಪ್ರಸ್ತುತ ರಕ್ತದ ಬೇಡಿಕೆ ಹೆಚ್ಚಿಗಿಲ್ಲದಿದ್ದರೂ, ದಾನಿಗಳ ಕೊರತೆಯಿಂದಾಗಿ ನಿಯಮಿತವಾಗಿ ರಕ್ತದ ಅಗತ್ಯತೆ ಇರುವ ಥಲಸ್ಸೇಮಿಯಾ ರೋಗಿಗಳಿಗೆ, ಕಿಡ್ನಿ ವೈಲ್ಯದಿಂದ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವವರು, ಕ್ಯಾನ್ಸರ್ ರೋಗಿಗಳು ಹಾಗೂ ಗರ್ಭಿಣಿಯರಿಗೆ ಹೆರಿಗೆ ಸಂದರ್ಭದಲ್ಲಿ ರಕ್ತ ಪೂರೈಕೆಗೆ ಸಮಸ್ಯೆಯಾಗಲಿದೆ. ಹಾಗಾಗಿ ರಕ್ತದ ಅಗತ್ಯವಿರುವವರು ಕೊಟ್ಟು- ಪಡೆದುಕೊಳ್ಳುವುದು ಅನಿವಾರ್ಯ.
ಮಹಾರಾಷ್ಟ್ರ ಅವಲಂಬನೆ : ಉತ್ತರ ಕರ್ನಾಟಕ ಭಾಗದಲ್ಲಿ ರಕ್ತದಾನದ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇರುವುದರಿಂದ, ಈ ಭಾಗದ ರಕ್ತ ನಿಧಿಗಳು ಮಹಾರಾಷ್ಟ್ರವನ್ನು ಅವಲಂಬಿಸಿವೆ. ಹಾಗಾಗಿ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಮಹಾರಾಷ್ಟ್ರದಲ್ಲಿ ಶಿಬಿರ ನಡೆಸಿ ರಕ್ತ ಸಂಗ್ರಹ ಮಾಡಲಾಗುತ್ತಿದೆ ಎನ್ನುತ್ತಾರೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆಯ ಉಪಾಧ್ಯಕ್ಷ ಆನಂದ್ ಎಸ್. ಜಿಗಜಿಣ್ಣಿ.
ತಜ್ಞರು ಹೇಳುವಂತೆ ರಕ್ತದಾನದ ಉಪಯೋಗಗಳು
* ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ
* ಹೃದ್ರೋಗ ಅಪಾಯ ಶೇ. 80 ತಗ್ಗುತ್ತದೆ
* ದೇಹದಲ್ಲಿ ಶೇ. 20 ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ
* ದೇಹತೂಕ ನಿಯಂತ್ರಣದಲ್ಲಿರುತ್ತದೆ
* ಕಾಲಕಾಲಕ್ಕೆ ಆರೋಗ್ಯದ ಮಾಹಿತಿ ಲಭ್ಯವಾಗುತ್ತದೆ
ಯಾರು ರಕ್ತದಾನ ಮಾಡಬಹುದು?
* 45 ಕೆ.ಜಿ. ಗಿಂತ ಹೆಚ್ಚು ತೂಕ ಇರುವ ಆರೋಗ್ಯವಂತರು
* ಪುರುಷರಲ್ಲಿ 12-14 ಎಚ್‌ಬಿ / ಮಹಿಳೆಯರಲ್ಲಿ 11-13 ಎಚ್‌ಬಿ ಇರುವವರು
* ರಕ್ತದ ಒತ್ತಡ ನಿಯಂತ್ರಣದಲ್ಲಿರುಬೇಕು
* ತಿಂಗಳ ಅವಧಿಯಲ್ಲಿ ಸಾಂಕ್ರಾಮಿಕ ರೋಗಕ್ಕೆ ಒಳಗಾಗಿರಬಾರದು
ಕೋಟ್
ಭಾರತೀಯ ರೆಡ್ ಕ್ರಾಸ್ ಬೆಂಗಳೂರು ಶಾಖೆಯೊಂದರಲ್ಲೇ ತಿಂಗಳಿಗೆ 2 ಸಾವಿರದಿಂದ 2,500 ಯೂನಿಟ್ ರಕ್ತ ಸಂಗ್ರಹಿಸಲಾಗುತ್ತಿತ್ತು. ಆದರೆ ಕಳೆದ 2 ತಿಂಗಳಲ್ಲಿ ದಾನಿಗಳ ಕೊರತೆ ಕಾಡುತ್ತಿದೆ. ರಕ್ತ ಸಂಗ್ರಹ ಪ್ರಮಾಣ 1,800 ಯೂನಿಟ್‌ಗೆ ಇಳಿಕೆ ಕಂಡಿದೆ. ರಾಜ್ಯಾದ್ಯಂತ ಇದೇ ಪರಿಸ್ಥಿತಿ ಇದೆ. ಜನರು ಸ್ವಯಂ ಪ್ರೇರಿತರಾಗಿ ರಕ್ತ ದಾನ ಮಾಡಲು ಮುಂದಾಗಬೇಕು.
-ಆನಂದ್ ಎಸ್. ಜಿಗಜಿಣ್ಣಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ (ಕರ್ನಾಟಕ) ಉಪಾಧ್ಯಕ್ಷ