ರಕ್ತ ಚಂದ್ರಗ್ರಹಣ ವಿಸ್ಮಯಕಾರಿ, ಭಯಪಡುವ ಅಗತ್ಯವಿಲ್ಲ

sahitya hunnime programme
ಶಿವಮೊಗ್ಗದ ಸಾಹಿತ್ಯ ಗ್ರಾಮದಲ್ಲಿ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ಡಾ. ಶೇಖರ್ ಗೌಳೇರ್ ಮಾತನಾಡಿದರು. ಡಿ.ಮಂಜುನಾಥ, ಸೂರ್ಯಪ್ರಕಾಶ್, ಎಂ.ನವೀನ್‌ಕುಮಾರ್, ಸಂತೋಷ ಬಿದರಗದ್ದೆ, ಡಾ. ಕೆ.ಜಿ.ವೆಂಕಟೇಶ್, ಡಿ.ಗಣೇಶ್, ಪಿ.ಕೆ.ಸತೀಶ್, ಭಾರತಿ ಬಾಯಿ ಇದ್ದರು.
Published on

ಶಿವಮೊಗ್ಗ: ಹೊಸ ಆವಿಷ್ಕಾರ ಸೌಲಭ್ಯಗಳು ಎಲ್ಲರಿಗೂ ಬೇಕು. ಆದರೆ ಅಂತಹ ಆವಿಷ್ಕಾರಕ್ಕೆ ಪೂರಕವಾದ ವಿಜ್ಞಾನ ಮತ್ತು ವೈಚಾರಿಕತೆ ಯಾರಿಗೂ ಬೇಡವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಡಾ. ಶೇಖರ್ ಗೌಳೇರ್ ಬೇಸರ ವ್ಯಕ್ತಪಡಿಸಿದರು.

ಸಾಹಿತ್ಯ ಗ್ರಾಮದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಏರ್ಪಡಿಸಿದ್ದ 241ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನದ ಸೌಲಭ್ಯ ಎಲ್ಲರಿಗೂ ಬೇಕು. ಅದರಿಂದ ಚೆನ್ನಾಗಿ ಬದುಕುತ್ತೇವೆ. ಆದರೆ ವೈಚಾರಿಕತೆ ಬೇಡವಾಗಿದೆ. ರಕ್ತ ಚಂದ್ರಗ್ರಹಣ ವಿಸ್ಮಯಕಾರಿ. ಅದರಿಂದ ಯಾವುದೇ ಭಯಪಡುವ ಅಗತ್ಯವಿಲ್ಲ. ಈ ಗ್ರಹಣಗಳು ಏನೂ ಮಾಡುವುದಿಲ್ಲ. ಅದು ಎಲ್ಲ ಕಾಲದಲ್ಲಿಯೂ ಆಗುತ್ತಿವೆ ಎಂದರು. ಗ್ರಹಣದಲ್ಲಿ ಉಪವಾಸ ಇರಬೇಕು. ಸ್ನಾನ ಮಾಡಬೇಕು ಎಂದೆಲ್ಲ ಸುಳ್ಳು ಹೇಳಲಾಗುತ್ತಿದೆ. ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಆರಂಭ ಆದಾಗಿನಿಂದ ಇಂತಹ ಅನೇಕ ಗ್ರಹಣಗಳು ಆಗಿವೆ. ಆಗೆಲ್ಲ ನಾವು ಹೊಟ್ಟೆ ತುಂಬ ತಿಂದು ಕಾರ್ಯಕ್ರಮ ಮಾಡಿದ್ದೇವೆ. ಯಾರಿಗೂ ಏನೂ ಆಗಿಲ್ಲ. ಆಕಾಶ ಕಾಯಗಳು ಸುತ್ತುತ್ತಲೇ ಇರುತ್ತವೆ. ಅವುಗಳ ಕುರಿತು ಸಂಶೋಧನೆ ನಡೆಸಿ ಸತ್ಯವನ್ನು ತಿಳಿಸಿದ ವಿಜ್ಞಾನಿಗಳ ಶ್ರಮವನ್ನು ನಾವು ಸ್ಮರಿಸಬೇಕು ಎಂದು ವಿವರಿಸಿದರು. ಸಾಹಿತಿಗಳಾದ ಸೂರ್ಯಪ್ರಕಾಶ್ ಕಥೆ ಹೇಳಿದರು. ಕವಿಗಳಾದ ಎಂ.ನವೀನ್‌ಕುಮಾರ್, ಸಂತೋಷ ಬಿದರಗದ್ದೆ, ಡಾ. ಕೆ.ಜಿ.ವೆಂಕಟೇಶ್, ಡಿ.ಗಣೇಶ್, ಪಿ.ಕೆ.ಸತೀಶ್, ಭಾರತಿ ಬಾಯಿ, ಅನಿತಾ ಸೂರ್ಯ, ಶೋಭಾ ಸತೀಶ್ ಕವನ ವಾಚಿಸಿದರು. ಗಾಯಕರಾದ ನಳಿನಾಕ್ಷಿ, ಎಸ್.ನಾರಾಯಣ, ಮಹಮ್ಮದ್ ಷರೀಫ್, ಮಂಜುಳಾ, ಶೃತಿ, ಪೃಥ್ವಿ, ಮಹಾದೇವಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಎಂ.ಎಂ.ಸ್ವಾಮಿ, ಕೆ.ಎಸ್.ಮಂಜಪ್ಪ, ಭೈರಾಪುರ ಶಿವಪ್ಪಗೌಡ ಉಪಸ್ಥಿತರಿದ್ದರು.

ಆಯಾ ಕಾಲಘಟ್ಟದಲ್ಲಿ ನಮ್ಮ ದಾರ್ಶನಿಕರು ವೈಚಾರಿಕತೆ ಕುರಿತು ಹೇಳಿದ್ದರೂ ಅದು ಜನರನ್ನು ತಲುಪಲೇ ಇಲ್ಲ ಎನ್ನುವ ರೀತಿಯಲ್ಲಿ ಜಡವಾಗಿದೆ. ಸಾಕ್ಷರ ಪ್ರಮಾಣ ಹೆಚ್ಚಾದಂತೆಲ್ಲ ಮೌಢ್ಯವೂ ತುಂಬಿ ತುಳುಕುತ್ತಿದೆ. ಅಂತಹ ಮನಸ್ಸುಗಳಿಗೆ ಜಾಗೃತಿ ನೀಡಲೆಂದೇ ಇಂತಹ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಡಿ.ಮಂಜುನಾಥ, ಜಿಲ್ಲಾಧ್ಯಕ್ಷ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net