ರಕ್ತದಾನಿಗಳೇ ನಿಜವಾದ ಹೀರೋಗಳು: ಡಿಎಚ್‌ಒ ಡಾ. ರಾಜೇಶ್ ಸುರಗಿಹಳ್ಳಿ

world blood donation day
ವಿಶ್ವ ರಕ್ತದಾನಿಗಳ ದಿನವನ್ನು ಡಾ. ಸಿದ್ದನಗೌಡ ಪಾಟೀಲ ಉದ್ಘಾಟಿಸಿದರು. ಡಾ. ರಾಜೇಶ್ ಸುರಗಿಹಳ್ಳಿ, ಡಾ. ಗುಡುದಪ್ಪ ಕಸಬಿ, ಡಾ. ಜಿ.ಸಿ.ದಿನೇಶ್, ಡಾ. ಎಂ.ಎಸ್.ಅರುಣ್, ಕೆ.ಟಿ.ಕೆ.ಉಲ್ಲಾಸ್, ಡಾ. ರವಿಕುಮಾರ್, ಡಾ. ಮಂಜುನಾಥ ನಾಗಲೀಕರ್ ಇದ್ದರು.
Published on

ಶಿವಮೊಗ್ಗ: ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ. ಕೃತಕವಾಗಿ ಸೃಷ್ಟಿಸಲು ಬರುವುದಿಲ್ಲ. ಮನುಷ್ಯ ಮಾತ್ರ ಇನ್ನೊಬ್ಬ ಮನುಷ್ಯನಿಗೆ ರಕ್ತ ನೀಡಬಹುದು. ರಕ್ತದಾನ ಮಾಡಿ ಹಲವರ ಜೀವ ಉಳಿಸುತ್ತಿರುವ ರಕ್ತದಾನಿಗಳು ನಿಜವಾದ ಹೀರೋಗಳು ಎಂದು ಡಿಎಚ್‌ಒ ಡಾ. ರಾಜೇಶ್ ಸುರಗಿಹಳ್ಳಿ ಹೇಳಿದರು.

ಐಎಂಎ(ಭಾರತೀಯ ವೈದ್ಯಕೀಯ ಸಂಘ) ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸುಬ್ಬಯ್ಯ ನರ್ಸಿಂಗ್ ಕಾಲೇಜು, ರೋಟರಿ ಸಂಸ್ಥೆ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ನಾವು ಮಾಡುವ ಕೆಲಸ ಇತರರಿಗೆ ಪ್ರೇರಣೆಯಾಗಬೇಕು. ಅರ್ಹರೆಲ್ಲರೂ ಸ್ವಯಂಪ್ರೇರಿತ ರಕ್ತದಾನಕ್ಕೆ ಮುಂದಾಗಬೇಕು ಎಂದು ಹೇಳಿದರು.
ರಕ್ತದ ಕೊರತೆಯಿಂದ ಗರ್ಭಿಣಿ ಸೇರಿದಂತೆ ಯಾರ ಸಾವು ಸಂಭವಿಸಬಾರದೆಂಬ ಉದ್ದೇಶದಿಂದ ಜಿಲ್ಲಾ ಮತ್ತು ಎಲ್ಲ ತಾಲೂಕುಗಳಲ್ಲಿ ರಕ್ತನಿಧಿ ಕೇಂದ್ರಗಳಿವೆ. ನಮ್ಮ ಜನಸಂಖ್ಯೆಯ ಶೇ.1 ಭಾಗಕ್ಕೆ ರಕ್ತದ ಅವಶ್ಯಕತೆ ಇದೆ. ಜಿಲ್ಲೆಯಲ್ಲೇ ಒಂದು ತಿಂಗಳಿಗೆ 18 ಸಾವಿರ ಯುನಿಟ್ ರಕ್ತದ ಅವಶ್ಯಕತೆ ಇದೆ. ಆದ್ದರಿಂದ ರಕ್ತನಿಧಿ ಕೇಂದ್ರಗಳ ಲಭ್ಯತೆ ಮತ್ತು ರಕ್ತದಾನಿಗಳ ಸಂಖ್ಯೆ ಹೆಚ್ಚಬೇಕು. ರಕ್ತದಾನಕ್ಕಾಗಿ ರೋಗಿಗಳ ಕಡೆಯವರನ್ನು ಅಲೆಸುವುದರ ಬದಲಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ರಕ್ತವನ್ನು ತ್ವರಿತವಾಗಿ ನೀಡಲು ಸೂಚನೆ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಡಾ. ಜಿ.ಸಿ.ದಿನೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ 8 ರಕ್ತನಿಧಿ ಕೇಂದ್ರಗಳ ಸಹಕಾರದೊಂದಿಗೆ ರಕ್ತ ಸಂಗ್ರಹಣೆ ಮತ್ತು ವಿತರಣೆಯಾಗುತ್ತಿದೆ. ಅಪರೂಪದ ಬಾಂಬೆ ರಕ್ತ(ಬಾಂಬೆ ಬ್ಲಡ್)ವನ್ನು ಸಹ ಸಂಗ್ರಹ ಮಾಡುತ್ತಿದ್ದೇವೆ. 2022-23ನೇ ಸಾಲಿನಲ್ಲಿ 35,070 ಯೂನಿಟ್ ರಕ್ತ ನೀಡಲಾಗಿದೆ. ರಕ್ತನಿಧಿಗಳು, ಸಂಘ ಸಂಸ್ಥೆಗಳ ಸಹಕಾರದಲ್ಲಿ ಜಿಲ್ಲೆ ಉತ್ತಮ ಸೇವೆ ನೀಡುತ್ತಿದ್ದು ಅನೇಕ ಪ್ರಶಸ್ತಿಗಳನ್ನೂ ಪಡೆಯುತ್ತಿದೆ ಎಂದರು.
ಜಿಲ್ಲೆಯಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಸಾರ್ವಜನಿರು, ವೈದ್ಯರು, ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕೀಟ ಜನ್ಯ ರೋಗ ನಿಯಂತ್ರಣಾಧಿಕಾರಿ ಡಾ. ಗುಡುದಪ್ಪ ಕಸಬಿ, ಮೆಗ್ಗಾನ್ ಆಸ್ಪತ್ರೆ ಜಿಲ್ಲಾ ಸರ್ಜನ್ ಡಾ. ಸಿದ್ದನಗೌಡ ಪಾಟೀಲ್, ಐಎಂಎ ಜಿಲ್ಲಾ ಅಧ್ಯಕ್ಷ ಡಾ. ಎಂ.ಎಸ್.ಅರುಣ್, ಜಿಲ್ಲಾ ಯುವ ಕೇಂದ್ರದ ಅಧಿಕಾರಿ ಕೆ.ಟಿ.ಕೆ.ಉಲ್ಲಾಸ್, ಡಾ. ರವಿಕುಮಾರ್, ಡಾ. ಮಂಜುನಾಥ ನಾಗ್ಲೀಕರ್, ತಾಲೂಕು ವೈದ್ಯಾಧಿಕಾರಿ ಡಾ. ಚಂದ್ರಶೇಖರ್, ರೋಟರಿ ಸಂಸ್ಥೆಯ ಜಿ.ವಿಜಯಕುಮಾರ್ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net