ರಕ್ತದಾನದಿಂದ ಉತ್ತಮವಾಗಲಿದೆ ಆರೋಗ್ಯ

3spt3
ಸೋಮವಾರಪೇಟೆ ತಾಲೂಕಿನ ದೊಡ್ಡಮಳ್ತೆ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಶಿಕ್ಷಕಿ ಆಶಾ ರಕ್ತದಾನ ಮಾಡುವ ಮೂಲಕ ಜಾಗೃತಿ ಮೂಡಿಸಿದರು. ವೈದ್ಯರಾದ ಶಿಫಾ, ಸ್ನೇಹಾ, ಪಂಚಲಿಂಗೇಶ್ವರ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.
Published on

ಸೋಮವಾರಪೇಟೆ: ರಕ್ತದಾನ ಇನ್ನೊಂದು ಜೀವವನ್ನು ಉಳಿಸುವುದರ ಜತೆಗೆ ದಾನಿಗಳ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ಮಡಿಕೇರಿ ರಕ್ತನಿಧಿ ಕೇಂದ್ರ ವೈದ್ಯೆ ಡಾ.ಸ್ನೇಹಾ ಅಭಿಪ್ರಾಯಿಸಿದರು.

ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಮತ್ತು ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ದೊಡ್ಡಮಳ್ತೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ದಾನಿಗಳ ಅರೋಗ್ಯ ತಪಾಸಣೆ ಮಾಡಿ ನಂತರ ಮಾತನಾಡಿದರು.

ದಾನ ಮಾಡಿದ ರಕ್ತ ಶಸ್ತ್ರಚಿಕಿತ್ಸೆಗಳು, ಅಪಘಾತಗಳು, ಹೆರಿಗೆ ಅಥವಾ ತೀವ್ರತರಹದ ಪರಿಸ್ಥಿತಿಗಳಲ್ಲಿ ಅಗತ್ಯವಾದ ಸಹಾಯವನ್ನು ಮಾಡುವ ಮೂಲಕ ಮೂರು ಜೀವಗಳನ್ನು ಉಳಿಸುತ್ತದೆ ಎಂದು ಹೇಳಿದರು.

ಅಗಾಗ್ಗೆ ರಕ್ತದಾನ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ. ಹೃದಯ ಕಾಯಿಲೆಗಳು ಮತ್ತು ಪಾರ್ಶ್ವವಾಯು ಅಪಾಯ ಕಡಿಮೆಯಾಗುತ್ತದೆ. ರಕ್ತದಾನದಿಂದ ರಕ್ತದ ದಪ್ಪ ಕಡಿಮೆಯಾಗಿ ರಕ್ತಪರಿಚಲನೆ ಹೆಚ್ಚಾಗುತ್ತದೆ. ಹೊಸ ರಕ್ತ ಉತ್ಪತಿಯಾಗುತ್ತದೆ ಎಂದು ಹೇಳಿದರು.

ರಕ್ತದಾನದ ಸಂದರ್ಭ ಅರೋಗ್ಯ ತಪಾಸಣೆ ಆಗುತ್ತದೆ. ರಕ್ತದಾನಿಗಳಲ್ಲಿ ಅರೋಗ್ಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳಿದ್ದರೆ, ರಕ್ತನಿಧಿ ಕೇಂದ್ರದಿಂದ ರೋಗದ ಮಾಹಿತಿ ಸಿಗುತ್ತದೆ. ನಂತರ ಚಿಕಿತ್ಸೆ ಪಡೆದುಕೊಂಡು ಅಪಾಯದಿಂದ ಪಾರಾಗಬಹುದು ಎಂದು ಹೇಳಿದರು. ರಕ್ತದಾನದಿಂದ ಇನ್ನು ಅನೇಕ ಪ್ರಯೋಜನಗಳಿದ್ದು, ಅರೋಗ್ಯವಂತರು 3 ತಿಂಗಳಿಗೊಮ್ಮೆ ಸ್ವಯಂಪ್ರೇರಿತ ರಕ್ತದಾನ ಮಾಡಬೇಕು ಎಂದು ಹೇಳಿದರು.

ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ, ಉಪಾಧ್ಯಕ್ಷೆ ರಶೀದ, ಸದಸ್ಯ ಶಂಕರ್, ಪಿಡಿಒ ಸ್ಮಿತಾ, ರಕ್ತನಿಧಿ ಕೇಂದ್ರದ ಡಾ.ಶಿಫಾ, ಹಿರಿಯ ತಂತ್ರಜ್ಞಾಧಿಕಾರಿ ಪಂಚಲಿಂಗೇಶ್ವರ, ಸಮುದಾಯ ಅರೋಗ್ಯ ಅಧಿಕಾರಿ ಧರಣೇಶ್ ಇದ್ದರು. 20 ಜನರು ರಕ್ತದಾನ ಮಾಡಿದರು. ನೇತ್ರ ತಪಾಸಣಾ ಶಿಬಿರ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net