

ರಾಣೆಬೆನ್ನೂರ: ರಕ್ತದಾನದಿಂದ ಹೃದಯಾಘಾತದ ಅಪಾಯ ಕಡಿಮೆ ಮಾಡಬಹುದು. ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ನಿಯಂತ್ರಣದಲ್ಲಿರುವುದು ಸೇರಿ ಅನೇಕ ಪ್ರಯೋಜನಗಳಿವೆ ಎಂದು ಜಿಲ್ಲಾ ರಕ್ತ ಕೇಂದ್ರದ ವೈದ್ಯ ಡಾ. ಬಸವರಾಜ ತಳವಾರ ಹೇಳಿದರು.
ಇಲ್ಲಿಯ ಮುನ್ಸಿಪಲ್ ಮೈದಾನದಲ್ಲಿ ಬುಧವಾರ ಸ್ಥಳೀಯ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ಹಾಗೂ ಜಿಲ್ಲಾ ರಕ್ತ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ರಕ್ತ ನಮ್ಮ ದೇಹದ ಅಮೂಲ್ಯವಾದ ದ್ರವ್ಯ. ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸಲು ಸಾಧ್ಯ. ಕಳೆದ ವರ್ಷದ ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ ನಡೆಯುವ ಎಲ್ಲ ಶಿಬಿರಗಳಲ್ಲಿ ಸಂಗ್ರಹವಾಗುವದಕ್ಕಿಂತ ಹೆಚ್ಚು ಯುನಿಟ್ ರಕ್ತ ಸಂಗ್ರಹ ಮಾಡಿ ದಾಖಲೆಯಾಗಿತ್ತು. ಈ ವರ್ಷ ಅದಕ್ಕಿಂತಲೂ ಹೆಚ್ಚು ಜನರು ರಕ್ತದಾನ ಮಾಡಲಿದ್ದಾರೆ. ಪ್ರತಿ ವರ್ಷ ವಂದೇ ಮಾತರಂ ಸಂಸ್ಥೆಯ ಈ ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ಪ್ರಮುಖರಾದ ಬಸವರಾಜ ಕಮತದ, ಹರೀಶ ಸಣ್ಣಬೊಮ್ಮಾಜಿ, ಸುಮಾ ಲಮಾಣಿ, ಶ್ರೀನಿವಾಸ ಸುರಹೊನ್ನಿ, ಅಕ್ಕಮ್ಮ ಅಮಾಸಿ, ದಾವಣಗೆರೆಯ ಶಿಲ್ಪಾ, ಡಿ.ಎಸ್. ದೇವೇಂದ್ರಪ್ಪ ಮತ್ತು ಹಾವೇರಿ ರಕ್ತ ಕೇಂದ್ರದ ಸಿಬ್ಬಂದಿ ಇತರರಿದ್ದರು.