ಮೌಂಟ್ ಎವರೆಸ್ಟ್ ಏರಿದ ಅಂಧ ಮಹಿಳೆ

mount
Published on

ಶಿಮ್ಲಾ: 29 ವರ್ಷದ ದೃಷ್ಟಿಹೀನ ಮಹಿಳೆಯೋರ್ವರು ಜಗತ್ತಿನ ಅತಿ ಎತ್ತರದ ಶಿಖರವಾಗಿರುವ ಮೌಂಟ್ ಎವರೆಸ್ಟ್ ಏರುವ ಮೂಲಕ ಇತಿಹಾಸ ಬರೆದಿದ್ದಾರೆ. ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಚಾಂಗೊ ಗ್ರಾಮದ ಚೊಂಜನ್ ಅಂಗ್ಮೋ, ಮೌಂಟ್ ಎವರೆಸ್ಟ್ ಏರಿದ ಮೊದಲ ಅಂಧ ಮಹಿಳೆ.

ಕುರುಡುತನ ದೌರ್ಬಲ್ಯವಲ್ಲ. ತನ್ನ ಕನಸುಗಳಿಗೆ ದೃಷ್ಟಿಹೀನತೆ ಎಂದೂ ಅಡ್ಡಿಯಾಗಿಲ್ಲ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. 8ನೇ ವಯಸ್ಸಿಗೆ ದೃಷ್ಟಿ ಕಳೆದುಕೊಂಡ ಚೊಂಜನ್, ವಿಶ್ವದ ಅತಿ ಎತ್ತರದ ಶಿಖರದ ಮೇಲೆ ವಿಜಯದ ಪತಾಕೆ ಹಾರಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಮೇ 19, 2025ರಂದು ಬೆಳಗ್ಗೆ 8:30ಕ್ಕೆ ದಂಡು ಶೆರ್ಪಾ ಮತ್ತು ಗುರುಂಗ್ ಮೈಲಾ ಅವರೊಂದಿಗೆ ಮೌಂಟ್ ಎವರೆಸ್ಟ್ ಏರಿದ್ದಾರೆ. ನಾನು ಮೂರನೇ ತರಗತಿಯಲ್ಲಿ ಓದುತ್ತಿದ್ದ ವೇಳೆ ದೃಷ್ಟಿ ಕಳೆದುಕೊಂಡೆ. ಬಳಿಕ ನನ್ನದು ಹೋರಾಟಗಳಿಂದ ತುಂಬಿದ ಜೀವನವಾಗಿದ್ದು, ದೃಷ್ಟಿ ಕಳೆದುಕೊಂಡರೂ ಧೈರ್ಯ ಕಳೆದುಕೊಳ್ಳಲಿಲ್ಲ. ಮೌಂಟ್ ಎವರೆಸ್ಟ್ ಏರುವುದು ನನ್ನ ಕನಸಾಗಿತ್ತು. ಅದು ಈಗ ಈಡೇರಿದೆ. ಕುರುಡುತನ ಸಾಧನೆಗೆ ಅಡ್ಡಿಯಾಗಲು ನಾನು ಎಂದಿಗೂ ಬಿಡಲಿಲ್ಲ. ನನ್ನ ಧೈರ್ಯ ಮತ್ತು ದೃಢಸಂಕಲ್ಪ ಪರ್ವತಕ್ಕಿಂತ ಎತ್ತರ ಹಾಗೂ ಬಲಶಾಲಿಯಾಗಿದೆ ಎಂಬುದನ್ನು ಸಾಬೀತುಪಡಿಸಿದ್ದೇನೆ ಎಂದು ಚೊಂಜನ್ ಅಂಗ್ಮೋ ಹೇಳಿದ್ದಾರೆ. ಚೊಂಜನ್, ಈ ಮೊದಲು ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದು, ರಾಷ್ಟ್ರೀಯ ಮಟ್ಟದ ಜೂಡೋ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸಿದ್ಧಾರೆ. ಅಲ್ಲದೆ, ರಾಷ್ಟ್ರೀಯ ಮಟ್ಟದ ಮ್ಯಾರಥಾನ್​ಗಳಲ್ಲಿ ಎರಡು ಕಂಚಿನ ಪದಕ ಹಾಗೂ ದೆಹಲಿ ಮ್ಯಾರಥಾನ್​ನಲ್ಲಿ ಮೂರು ಬಾರಿ ಭಾಗವಹಿಸಿದ್ದಾರೆ, ಜೊತೆಗೆ ಪಿಂಕ್ ಮ್ಯಾರಥಾನ್ ಮತ್ತು ದೆಹಲಿ ವೇದಾಂತ ಮ್ಯಾರಥಾನ್​ನಲ್ಲಿಯೂ ಭಾಗವಹಿಸಿರುವುದು ವಿಶೇಷವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net