

ತನ್ನ ಪರ್ವತ ಪ್ರಸಂಗದಲ್ಲಿ ಯೇಸುಕಿಸ್ತ ಶಾಂತಿಗಾಗಿ ಶ್ರಮಿಸುವವರನ್ನು ಧನ್ಯರು ಎಂದು ಸಂಬೋಧಿಸುತ್ತಾನೆ. ಮಾತ್ರವಲ್ಲದೆ, ಅವರೇ ಈ ಭೂಮಿಗೆ ನಿಜವಾದ ಬಾಧ್ಯಸ್ಥರು ಎಂದಿದ್ದಾನೆ. ಅಂದಿನ ಗ್ರೀಕ್ ಭಾಷೆಯ ಸಂದರ್ಭದಲ್ಲಿ ಈ ಪದಕ್ಕೆ ಬಹಳ ಘನವಾದ ಅರ್ಥವಿದೆ. ಎಂದರೆ ಶಾಂತರು, ದಯಾವಂತರು, ವಿನಯಶೀಲರು ಎಂಬಂತಹ ಗುಣಗಳನ್ನೇ ಧನ್ಯರು ಎಂಬ ಆ ಪದ ಹೊಂದಿತ್ತು. ಆದರಿಂದು ಶಾಂತ ಎಂಬ ಶಬ್ದಕ್ಕೆ ಎಲ್ಲ ಸಕಾರಾತ್ಮಕ ಅರ್ಥಗಳ ಜೊತೆಗೆ ಬಲಹೀನ ಎಂಬ ಛಾಯೆಯೂ ಇದೆ.
ಶಾಂತರು, ವಿನಯಶೀಲರು, ತಾಳ್ಮೆಯುಳ್ಳವರು, ಸಾಧು ಸ್ವಭಾವದವರು, ನಮ್ರರು, ವಿನೀತರು ಮುಂತಾದವರೆಲ್ಲ ಭಕ್ತಿ ಮತ್ತು ಗೌರವ ಭಾವನೆಗಳಿಂದ ಕೂಡಿದ ವ್ಯಕ್ತಿಗಳಾಗಿರುತ್ತಾರೆ. ನಿಜವಾಗಿ ಇಂತಹವರೇ ಈ ಭೂಮಿಗೆ ಬಾಧ್ಯಸ್ಥರು ಎಂದು ಕ್ರಿಸ್ತ ಹೇಳುವಾಗ ಆ ಮಾತು ಇಡೀ ಪರ್ವತ ಪ್ರಸಂಗದ ಅಂತಸ್ಸತ್ವವೇ ಹರಳುಗಟ್ಟಿದಂತೆ ಇದೆ. ಇವಾವವೂ ಬಲಹೀನತೆಯ ಲಕ್ಷಣಗಳಲ್ಲ. ಬದಲಿಗೆ ಅವು ಬಹು ಶಕ್ತಿಯುತ, ಧನ್ಯತೆಯ ಗುಣಗಳೆಂದು ಯೇಸುಕ್ರಿಸ್ತ ಪ್ರತಿಪಾದಿಸುತ್ತಾನೆ. ಇಂತಹ ಸೌಮ್ಯ ಸ್ವಭಾವಗಳನ್ನು ತನ್ನೊಳಗೆ ಅಳವಡಿಸಿಕೊಂಡಿದ್ದ ನಮ್ಮ ದೇಶದ ಮೋಹನದಾಸ ಕರಮಚಂದ ಗಾಂಧಿ ಅವರು ಇವುಗಳ ಬಲದಿಂದಲೇ ಸಾಮ್ರಾಜ್ಯಶಾಹಿ ಆಂಗ್ಲರನ್ನು ಮಣಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೇ ಸದ್ಗುಣವನ್ನು ಅನುಕರಿಸಿದ ನೆಲ್ಸನ್ ಮಂಡೇಲ ಕೂಡ ಅದೇ ಆಂಗ್ಲರಿಂದ ತಮ್ಮ ದಕ್ಷಿಣ ಆಫ್ರಿಕ ದೇಶವನ್ನು ಸ್ವತಂತ್ರವಾಗಿಸುವಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದರು. ಅಹಂಕಾರಿಗಳು ಹಿಂಸಾವಾದಿಗಳು ಹಾಗೂ ಭಯೋತ್ಪಾದಕರು - ಇವರಾರೂ ಈ ಭೂಮಿಗೆ ಬಾಧ್ಯಸ್ಥರಾಗಲು ಸಾಧ್ಯವೇ ಇಲ್ಲ. ಏಕೆಂದರೆ ಇಂತಹವರೆಲ್ಲ ಈ ನೆಲದ ಅಂತಃಕರಣವನ್ನು ಛಿದ್ರ ಛಿದ್ರ ಮಾಡುವ ಹಿಂಸಾಪ್ರಿಯರು. ವರ್ತಮಾನದ ದಿನಗಳಲ್ಲಿ ಜಗತ್ತಿನಾದ್ಯಂತ ಇಂತಹ ವಿನಾಶಕಾರಿ ಶಕ್ತಿಗಳಿಂದ ಆಗುತ್ತಿರುವ ಸರ್ವನಾಶದ ಕುಕೃತ್ಯಗಳನ್ನು ನೆನೆಸಿಕೊಂಡಾಗ ಕ್ರಿಸ್ತ ಹೇಳಿದ ಆ ಮಾತು ಸಾರ್ವಕಾಲಿಕ ಸತ್ಯ ಎಂದು ಎನಿಸಿಕೊಳ್ಳುತ್ತದೆ.