

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉತ್ತರ ಭಾಗದ ಸೋಪೋರ್ ನಗರದಲ್ಲಿನ ಗುಜರಿ ಅಂಗಡಿಯೊಂದರಲ್ಲಿ ಸೋಮವಾರ ಸಂಭವಿಸಿದ್ದು ನಾಲ್ವರು ಸಾವನ್ನಪ್ಪಿದ್ದಾರೆ.
ಲಡಾಖ್ನಿಂದ ಬಂದಿದ್ದ ಟ್ರಕ್ನಿಂದ ಗುಜರಿ ವಸ್ತುಗಳನ್ನು ಇಳಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತಪಟ್ಟವರನ್ನು ನಜೀರ್ ಅಹ್ಮದ್ ನಡ್ರೊ (40), ಅಜೀಮ್ ಅಶ್ರಫ್ ಮಿರ್ (20), ಆದಿಲ್ ರಶೀದ್ ಭಟ್ (23) ಮತ್ತು ಮೊಹಮ್ಮದ್ ಅಝಾರ್ (25) ಎಂದು ಗುರುತಿಸಲಾಗಿದೆ. ಈ ದುರಂತ ಸಂಭವಿಸಿರುವ ಶೇರ್ ಕಾಲೋನಿಯ ನಿವಾಸಿಗಳು ಬಹುತೇಕ ಗುಜರಿ ವ್ಯಾಪಾರವನ್ನು ನಡೆಸುತ್ತಿದ್ದು, ಇದೀಗ ಸ್ಥಳೀಯ ಜನರಲ್ಲಿ ಆತಂಕ ಮೂಡಿಸಿದೆ.
ಘಟನೆಯ ಸ್ವರೂಪ ಮತ್ತು ಸ್ಫೋಟಕ್ಕೆ ಕಾರಣವಾದ ಅಂಶಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ವಿಧಿವಿಜ್ಞಾನ ತಜ್ಞರ ತಂಡ ಸ್ಥಳಕ್ಕೆ ಧಾವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು ಸ್ಥಳೀಯರು ಸುರಕ್ಷಿತವಾಗಿರುವಂತೆ ಅಧಿಕಾರಿಗಳು ಎಚ್ಚರಿಸಿದ್ದಾರೆ.