ಖಾಸಗಿ ವಿಡಿಯೋ ಕಳುಹಿಸಿ ಹಣಕ್ಕೆ ಬ್ಲ್ಯಾಕ್‌ಮೇಲ್: ಇಬ್ಬರ ಬಂಧನ

Crime Logo
Published on

ಬೆಂಗಳೂರು: ಹೋಟೆಲ್‌ನಲ್ಲಿ ರಹಸ್ಯ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದ್ದ ಖಾಸಗಿ ವಿಡಿಯೋ ಕಳುಹಿಸಿ ಹಣಕ್ಕೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮಹಿಳೆ ಸೇರಿ ಇಬ್ಬರನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆಂಗೇರಿಯ ಕಿರಣ್(೨೮) ಮತ್ತು ನಯನಾ(೪೪) ಬಂಧಿತರು. ೨೨ ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಉಡುಪಿ ಮೂಲದ ಆರೋಪಿಗಳಾದ ಕಿರಣ್ ಮತ್ತು ನಯನಾ ಪಾಲುದಾರಿಕೆಯಲ್ಲಿ ಕೆಂಚನಪುರ ಕೆಂಗೇರಿ ಮುಖ್ಯರಸ್ತೆಯಲ್ಲಿ ಹೋಟೆಲ್‌ವೊಂದನ್ನು ನಡೆಸುತ್ತಿದ್ದಾರೆ. ನಗರದ ಖಾಸಗಿ ಕಾಲೇಜೊಂದರಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿರುವ ಸಂತ್ರಸ್ತೆ ಯುವತಿ ಇತ್ತೀಚೆಗೆ ತನ್ನ ಸ್ನೇಹಿತ ಜತೆಗೆ ಈ ಹೋಟೆಲ್‌ಗೆ ತೆರಳಿ ಖಾಸಗಿ ಕ್ಷಣಗಳನ್ನು ಕಳೆದಿದ್ದರು. ಇದನ್ನು ರಹಸ್ಯ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದ ಆರೋಪಿ ಕಿರಣ್, ಯುವತಿ ಮೊಬೈಲ್‌ಗೆ ಖಾಸಗಿ ಫೋಟೋ ಹಾಗೂ ವಿಡಿಯೋ ಕಳುಹಿಸಿ ಡಿಲೀಟ್ ಮಾಡಿದ್ದಾನೆ. ನಂತರ ಆಕೆಗೆ ಕರೆ ಮಾಡಿ, ನೀನು ನಿನ್ನ ಸ್ನೇಹಿತನ ಜತೆಗೆ ನಮ್ಮ ಹೋಟೆಲ್ ರೂಮ್‌ನಲ್ಲಿ ಕಳೆದಿರುವ ಖಾಸಗಿ ಕ್ಷಣದ ವಿಡಿಯೋ ಹಾಗೂ ಫೋಟೊಗಳಿವೆ. ನೀನು ನನಗೆ ಒಂದು ಲಕ್ಷ ರೂ. ಹಣ ಕೊಡಬೇಕು. ಇಲ್ಲವಾದರೆ, ಈ ಅಶ್ಲೀಲ ವಿಡಿಯೋ, ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತೇನೆ. ಹಾಗೆಯೇ ನಿನ್ನ ಸಂಬಂಧಿಕರು ಹಾಗೂ ಸ್ನೇಹಿತರಿಗೂ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಪದೇ ಪದೇ ಯುವತಿಗೆ ಕರೆ ಮಾಡಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಈತನ ಕಾಟದಿಂದ ಬೇಸತ್ತ ಯುವತಿ, ಅನ್ಯ ಮಾರ್ಗವಿಲ್ಲದೆ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net