ಬೆಳಕನ್ನೇ ಪ್ರತಿಫಲಿಸದಷ್ಟು ಅತ್ಯಂತ ಗಾಢ ಕಪ್ಪು ಮೀನುಗಳು ಎಲ್ಲಿರುತ್ತವೆ ಗೊತ್ತಾ?

blackest fish
Published on

ನವದೆಹಲಿ: ವಿವಿಧ ರಂಗಿನ ಮೀನುಗಳು, ಕಾಮನಬಿಲ್ಲಿನಂತೆ ಬಣ್ಣಗಳನ್ನು ಹೊಮ್ಮಿಸುವ ಹೊಳಪಿನ ಮೈಯುಳ್ಳ ಮೀನುಗಳನ್ನು ನಾವೆಲ್ಲರೂ ನೋಡಿದ್ದೇವೆ. ಇವುಗಳಲ್ಲಿ ಕಪ್ಪು ಬಣ್ಣದ ಮೀನುಗಳೂ ಇರುತ್ತವೆ. ಆದರೆ, ಅವು ಬೆಳಕನ್ನು ಪ್ರತಿಫಲಿಸುವುದರಿಂದ ನೋಡಲು ಸುಂದರವಾಗಿ ಕಾಣುತ್ತವೆ. ಇಂಥ ಮೀನುಗಳನ್ನು ಮೀರಿ ಅತ್ಯಂತ ಕಡುಕಪ್ಪು ಬಣ್ಣದ, ಬೆಳಕನ್ನೇ ಪ್ರತಿಫಲಿಸದಷ್ಟು ಅತ್ಯಂತ ಗಾಢ ಕಪ್ಪು ಬಣ್ಣದ ಮೀನುಗಳು ಇವೆ ಎಂದರೆ ಅಚ್ಚರಿಯಾಗುತ್ತದೆ ಅಲ್ಲವೆ?

ಆದರೆ ಅಚ್ಚರಿ ಪಡಬೇಕಾಗಿಲ್ಲ. ಆಳ ಸಮುದ್ರದಲ್ಲಿ ಸೂರ್ಯನ ಕಿರಣಗಳೇ ತಲುಪದ ಪ್ರದೇಶಗಳು ಸದಾ ಕತ್ತಲುಮಯವಾಗಿರುತ್ತವೆ. ಅಂಥ ಪ್ರದೇಶದಲ್ಲಿ ಶತ್ರುಗಳ ದಾಳಿಯಿಂದ ಪಾರಾಗಲು ಮೀನುಗಳು ಬೆಳಕನ್ನೇ ಪ್ರತಿಫಲಿಸದಷ್ಟು ಗಾಢವಾದ ಕಪ್ಪು ಬಣ್ಣವನ್ನು ಹೊಂದಿರುವುದು ಪತ್ತೆಯಾಗಿದೆ.

ಫ್ಯಾಂಗ್​ಟೂತ್​, ಪೆಸಿಫಿಕ್​ ಬ್ಲ್ಯಾಕ್​ಡ್ರ್ಯಾಗನ್​, ಆ್ಯಂಗ್ಲರ್​ಫಿಶ್​ ಮತ್ತು ಬ್ಲ್ಯಾಕ್​ ಸ್ವಾಲೋಯರ್​ ಸೇರಿ ಇಂಥ 16 ಪ್ರಬೇಧಗಳ ಮೀನುಗಳಿವೆ. ಇವುಗಳ ಮೈಬಣ್ಣ ಎಷ್ಟು ಕಪ್ಪಾಗಿದೆ ಎಂದರೆ, ಶೇ.0.5 ಬೆಳಕನ್ನೂ ಕೂಡ ಇವು ಪ್ರತಿಫಲಿಸುವುದಿಲ್ಲ. ಬೆಳಕಿನಲ್ಲಿ ಇವುಗಳ ಚಿತ್ರ ತೆಗೆಯ ಬೇಕೆಂದರೂ ನೆರೆಳಿನಗೆರೆಯಂತೆ ಗೋಚರಿಸುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಆಳಸಮುದ್ರದಲ್ಲಿ ಅಂದರೆ 650 ಅಡಿ (200 ಮೀಟರ್​) ಆಳಕ್ಕೆ ಸೂರ್ಯನ ಕಿರಣಗಳು ಇಳಿಯುವುದಿಲ್ಲ. ಹಾಗಾಗಿ ಈ ಪ್ರದೇಶದಲ್ಲಿ ಸದಾ ಕತ್ತಲಾಗಿರುತ್ತದೆ. ಬೆಳಕೆಂದರೆ ಏನು ಎಂಬುದೇ ಇಲ್ಲಿನ ಜೀವಿಗಳಿಗೆ ತಿಳಿದಿರುವುದಿಲ್ಲ. ಇದೀಗ ನಾವು ಹೇಳುತ್ತಿರುವ ಕೆಲವು ಮೀನುಗಳು ಅಂದಾಜು 3 ಕಿ.ಮೀ. ಆಳದವರೆಗೆ (5 ಸಾವಿರ ಮೀಟರ್​) ವಾಸವಾಗಿರುತ್ತವೆ. ಇಲ್ಲಿ ತಮ್ಮ ಶತ್ರುಗಳ ಕಣ್ಣಿಗೆ ಗೋಚರಿಸದೆ, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅತ್ಯಂತ ಗಾಢ ಕಪ್ಪು ಮೈಬಣ್ಣವನ್ನು ಹೊಂದಿರುತ್ತವೆ ಎಂದು ವಿವರಿಸಿದ್ದಾರೆ.

ಇಷ್ಟು ಆಳದಲ್ಲಿ ಅಲ್ಲಿರುವ ಜಲಚರಗಳ ಮೈನಿಂದ ಹೊಮ್ಮುವ ಜೈವಿಕದೀಪ್ತಿ (ಬಯೋಲ್ಯೂಮಿನೆಸೆನ್ಸ್​) ಶತ್ರುಗಳ ಕಣ್ಣಿಗೆ ಸುಲಭಗ್ರಾಹ್ಯವಾಗಿಸುತ್ತದೆ. ಆದ್ದರಿಂದ, ಇಲ್ಲಿರುವ ಜಲಚರಗಳು ಬಹುತೇಕ ಅತ್ಯಂತ ಗಾಢ ಕಪ್ಪುಬಣ್ಣವನ್ನು ಹೊಂದಿರುತ್ತವೆ. ಈ ಎಲ್ಲ ಮೀನುಗಳು ಸ್ವತಂತ್ರವಾಗಿ ವಿಕಸನಕ್ಕೆ ಒಳಗಾಗಿ ಈ ಮೈಬಣ್ಣವನ್ನು ಪಡೆದುಕೊಂಡಿವೆ. ಈ ಜಾತಿಯ ಹಲವು ಮೀನುಗಳಲ್ಲಿ ಅಲ್ಪಪ್ರಮಾಣದ ಜೈವಿಕದೀಪ್ತಿಯ ರಂಗುಗಳು ಇವೆ. ಆದರೆ, ತಮ್ಮ ಬೇಟೆಯನ್ನು ವಂಚಿಸಲಷ್ಟೇ ಇಂಥ ರಂಗುಗಳ ನೆರವು ಪಡೆಯುತ್ತವೆ ಎಂದು ಹೇಳಿದ್ದಾರೆ.

ಈ ಮೀನುಗಳ ದೇಹದಲ್ಲಿ ಮೆಲಾನಿನ್​ ವರ್ಣದ್ರವ್ಯ ಅತಿಹೆಚ್ಚು ಪ್ರಮಾಣದಲ್ಲಿ ಇರುತ್ತದೆ. ತುಂಬಾ ಅಚ್ಚರಿದಾಯಕ ರೀತಿಯಲ್ಲಿ ಇವುಗಳ ದೇಹದ ತುಂಬಾ ಅದು ಹರಡಿಕೊಂಡಿರುತ್ತದೆ. ನಿಖರವಾದ ಆಕಾರ, ಗಾತ್ರದಲ್ಲಿ ಈ ವರ್ಣದ್ರವ್ಯತಂತುಗಳು ಇವುಗಳ ಚರ್ಮದಲ್ಲಿ ಒತ್ತೊತ್ತಾಗಿ, ಪದರಪದರವಾಗಿ ಹಬ್ಬಿರುತ್ತವೆ. ಮೀನುಗಳ ದೇಹದ ಮೇಲೆ ಬೀಳುವ ಬೆಳಕು ಪ್ರತಿಫಲಿಸದೇ ತಮ್ಮಲ್ಲೇ ಇಂಗಿಹೋಗುವ ರೀತಿ ಮೀನುಗಳು ತಮ್ಮ ಮೈಬಣ್ಣ ಅತ್ಯಂತ ಗಾಢ ಕಪ್ಪುಬಣ್ಣದಲ್ಲಿರುವಂತೆ ಎಚ್ಚರವಹಿಸಿರುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net