

ಬೆಂಗಳೂರು: ಗಂಡನನ್ನು ಕಪ್ಪು ಚರ್ಮದವನು ಎಂದು ಸಂಭೋದಿಸಿ ಅವಮಾನಿಸುತ್ತಿದ್ದ ಪತ್ನಿಯ ಧೋರಣೆಯನ್ನು ಕ್ರೌರ್ಯವೆಂದು ಪರಿಗಣಿಸಿರುವ ಹೈಕೋರ್ಟ್, ದಂಪತಿಯ ವಿಹಾಹ ಅಸಿಂಧುಗೊಳಿಸಿ ವಿಚ್ಛೇದನ ಮಂಜೂರು ಮಾಡಿದೆ.
ವಿಚ್ಛೇದನ ಮಂಜೂರಾತಿಗೆ ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿರುವ ಹೈಕೋರ್ಟ್ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಪ್ರಕರಣದಲ್ಲಿ ಲಭ್ಯವಿರುವ ದಾಖಲೆಗಳನ್ನು ಆಳವಾಗಿ ಪರಿಶೀಲಿಸಿದಾಗ ಕಪ್ಪು ಚರ್ಮದವರು ಎಂದು ಸದಾ ಹೇಳುವ ಮೂಲಕ ಪತಿಗೆ ಪತ್ನಿ ಅವಮಾನ ಮಾಡುತ್ತಿದ್ದರು. ಸಕಾರಣವಿಲ್ಲದಿದ್ದರೂ ಪತಿಯ ತೆ ಇರದೇ ಪತ್ನಿ ತವರು ಮನೆ ಸೇರಿದ್ದಾರೆ. ಆದರೆ, ಈ ವಿಷಯ ಮರೆಮಾಚಲು ಪತಿ ಮೇಲೆ ಅಕ್ರಮ ಸಂಬಂಧ ಕುರಿತು ಸುಳ್ಳು ಆರೋಪ ಹೊರಿಸಿದ್ದಾರೆ. ಇದು ನಿಸ್ಸಂದೇಹವಾಗಿ ಕ್ರೌರ್ಯವಾಗಲಿದೆ ಎಂದು ತೀರ್ಮಾನಿಸಿದ ನ್ಯಾಯಾಲಯ, ಪತಿಗೆ ವಿಚ್ಛೇದನ ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಿತು. ಜತೆಗೆ, ಪತಿಯ ಮೇಲ್ಮನವಿ ಪುರಸ್ಕರಿಸಿ ವಿವಾಹ ಅನೂರ್ಜಿತಗೊಳಿಸಿ ವಿಚ್ಛೇದನ ಮಂಜೂರು ಮಾಡಿದೆ.
ಪತ್ನಿ ಸಾಕಷ್ಟು ಕಿರುಕುಳ ನೀಡಿದ್ದಾಳೆ:
ಬೆಂಗಳೂರಿನ ನಿವಾಸಿ ಮಧುಸೂದನ್ ಮತ್ತು ಮಂಜುಳ (ಇಬ್ಬರ ಹೆಸರು ಬದಲಿಸಲಾಗಿದೆ) 2007ರಲ್ಲಿ ಮದುವೆಯಾಗಿದ್ದರು. ಆದರೆ, 2012ರಲ್ಲಿ ವಿಚ್ಛೇದನ ಕೋರಿ ಮಧುಸೂದನ್ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ವಜಾಗೊಳಿಸುವ ಮೂಲಕ ವಿಚ್ಛೇದನ ನಿರಾಕರಿಸಿ ಬೆಂಗಳೂರಿನ 2ನೇ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯ 2017ರ ಜ.13ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಮಧುಸೂಧನ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ವಿವಾಹ ನಂತರ ಪತ್ನಿ ಸದಾ ನನ್ನನ್ನು ಕಪ್ಪು ಚರ್ಮದವರೆಂದು ಹೇಳುತ್ತಾ ಅವಮಾನಿಸುತ್ತಿದ್ದರು. ಮಗಳಿಗಾಗಿ ನಾನು ಆ ಅವಮಾನ ಸಹಿಕೊಳ್ಳುತ್ತಿದ್ದೆ. ಇದಲ್ಲದೇ ಪತ್ನಿ 2011ರ ಅ.29ರಂದು ನನ್ನ ಹಾಗೂ ವೃದ್ಧ ತಾಯಿ ಸೇರಿ ಕುಟುಂಬ ಸದಸ್ಯರೆಲ್ಲರ ವಿರುದ್ಧ ಕಿರುಕುಳ ಹಾಗೂ ಕೌಟುಂಬಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಿಸಿದ್ದರು. ಆ ದೂರಿನ ಸಂಬಂಧ ಪೊಲೀಸರು ನನಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ. ಹಲವು ದಿನಗಳ ಕಾಲ ಪೊಲೀಸ್ ಠಾಣೆ ಮತ್ತು ಕೋರ್ಟ್‌ಗೆ ಅಲೆದಾಡುವಂತಾಯಿತು. ಬಳಿಕ ನನ್ನ ತೊರೆದು ತವರು ಮನೆ ಸೇರಿದ ಪತ್ನಿ ವಾಪಸ್ಸಾಗಲೇ ಇಲ್ಲ. ನನ್ನೊಂದಿಗೆ ದಾಂಪತ್ಯ ಜೀವನ ಮುಂದುವರಿಸಲು ಆಕೆ ಆಸಕ್ತಿ ಹೊಂದಿಲ್ಲ. ನನಗೆ ಉದ್ಯೋಗ ನೀಡಿದವರಿಗೂ ಪತ್ನಿ ದೂರು ನೀಡಿದ್ದರು. ಅವರು ನನ್ನನ್ನು ಕರೆದು ವಿವರಣೆ ಪಡೆದರು. ಪತ್ನಿಯ ನಡೆಯಿಂದ ನನಗೆ ಮಾನಸಿಕ ಯಾತನೆ ಉಂಟಾಯಿತು. ಅದರಿಂದ ನಾನು ಖಿನ್ನತೆಗೂ ಒಳಗಾದೆ. ಪತ್ನಿಯ ಎಸಗಿರುವ ಕ್ರೌರ್ಯ ಪರಿಗಣಿಸಿ ವಿಚ್ಛೇದನ ಮಂಜೂರು ಮಾಡಬೇಕು ಮೇಲ್ಮನವಿಯಲ್ಲಿ ಎಂದು ಮಧುಸೂದನ್ ಕೋರಿದ್ದರು.